ದಾವಣಗೆರೆಯಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ
ಬೆಂಗಳೂರು : ಉತ್ತರ ಪ್ರದೇಶದ ಬರೇಲಿಯಲ್ಲಿ ಆರಂಭವಾದ ‘ಐ ಲವ್ ಮೊಹಮ್ಮದ್’ ಭಿತ್ತಿಪತ್ರ ವಿವಾದ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಬಳಿಕ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ದಾವಣಗೆರೆಯಲ್ಲಿ ಇದೇ ಪೋಸ್ಟರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಿಗುವಿನ ಸ್ಥಿತಿ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ಭಿತ್ತಿ ಪತ್ರ ಹಾಕಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ಒಂದು ಗುಂಪು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದೆ. ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್‌ನಲ್ಲಿ ಅನ್ಯ ಕೋಮಿನ ಮನೆ ಮುಂದೆ ಐ ಲವ್ ಮಹಮ್ಮದೀಯ ಫ್ಲೆಕ್ಸ್ ಸೇರಿದಂತೆ ಬೇರೆ ಬೇರೆ ಫ್ಲೆಕ್ಸ್ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಎರಡು ಕೋಮಿನ ಯುವಕರ ನಡುವೆ ವಾಗ್ವಾದ ಶುರುವಾಗಿದ್ದು, ನಮ್ಮ ಮನೆಯ ಮುಂಭಾಗ ಫ್ಲೆಕ್ಸ್ ಹಾಕಬೇಡಿ ಎಂದು ಹೇಳಿದ್ದಕ್ಕೆ ಗಲಾಟೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಉರುಸ್ ಯಾತ್ರೆ ವೇಳೆ ‘ಐ ಲವ್ ಮೊಹಮ್ಮದ್’ ಎಂಬ ಪೋಸ್ಟರ್ ಹಿಡಿದು ಮೆರವಣಿಗೆ ಸಾಗಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿ ಹಿಂದೂಗಳು ‘ಐ ಲವ್ ಮಹಾದೇವ್’ ಎಂಬ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಬಳಿಕ ಈ ವಿವಾದ ಹಲವು ರಾಜ್ಯಗಳಿಗೆ ಹಬ್ಬಿದ್ದು, ಕೋಮುದ್ವೇಷಕ್ಕೆ ಕಾರಣವಾಗಿದೆ.
ಅನ್ಯಕೋಮಿನ ಯುವಕರು ಮನೆ ಮನೆಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಫ್ಲೆಕ್ಸ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್ ಹಾಕಿದ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
























