ರಾಷ್ಟ್ರಪತಿ, ಪ್ರಧಾನಿಯಿಂದ ಶೋಕ ಸಂದೇಶ
ಬೆಂಗಳೂರು : ಕನ್ನಡದ ಹೆಮ್ಮೆಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪನವರು ಬುಧವಾರ ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಮೈಸೂರಿನಲ್ಲಿ ನೆರವೇರಲಿದೆ.
ಇಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪಾರ್ಥೀವ ಶರೀರ ಮೈಸೂರು ತಲುಪಲಿದೆ. ಬಳಿಕ ಮೈಸೂರು ಕಲಾಮಂದಿರದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಕೋಲ್ಡ್ ಸ್ಟೋರೆಜ್‌ನಲ್ಲಿ ಇಡಲಾಗುತ್ತೆ. ಶುಕ್ರವಾರ ಬೆಳಗ್ಗೆ ಕುವೆಂಪುನಗರದಲ್ಲಿರುವ ಭೈರಪ್ಪನವರ ನಿವಾಸದಲ್ಲಿ ಪಾರ್ಥಿವ ಶರೀರ ಇಡಲಾಗುತ್ತದೆ. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಭೈರಪ್ಪ ಅವರ ಪುತ್ರ ರವಿಶಂಕರ್ ಲಂಡನ್‌ನಿಂದ ಆಗಮಿಸುತ್ತಿದ್ದಾರೆ.
ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಅನೇಕ ಗಣ್ಯರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ. 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿಗರೆದಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
























