ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲು ಡಿಸಿಗೆ ಮನವಿ

ಹಬ್ಬಗಳ ಸಂದರ್ಭದಲ್ಲಿ ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡಿ ಕಲೆಗೆ ಅಪಚಾರ

ಮಂಗಳೂರು : ಗಣೇಶೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಮತ್ತಿತರ ಹಬ್ಬಗಳ ಸಂದರ್ಭಗಳಲ್ಲಿ ಯಕ್ಷಗಾನದ ವೇಷ ಹಾಕಿ ಭಿಕ್ಷಾಟನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ನಿಷೇಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ದ.ಕ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ಯಕ್ಷಗಾನದ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಬೇಕೆಂದು ಮನವಿ ಮಾಡಿದೆ.





















































 
 

ವೇದಿಕೆಗಳಲ್ಲಿ ಮಾತ್ರ ಈ ಧಾರ್ಮಿಕ ಶ್ರೇಷ್ಠ ಕಲೆಯ ಪ್ರದರ್ಶನವಾಗಬೇಕು. ಆದರೆ ಅಷ್ಟಮಿ, ಗಣೇಶೋತ್ಸವ, ನವರಾತ್ರಿ ಮೊದಲಾದ ಸಂದರ್ಭದಲ್ಲಿ ಯಕ್ಷಗಾನ ವೇಷ ಧರಿಸಿಕೊಂಡು ಭಿಕ್ಷೆ ಎತ್ತುವುದು ಕಂಡು ಬರುತ್ತಿದೆ.

ಯಕ್ಷಗಾನಕ್ಕೆ ತನ್ನದೇ ಆದ ಗೌರವವಿದೆ. ಇದು ಪೂಜನೀಯವೂ ಆಗಿದ್ದು, ದೇಶ ವಿದೇಶಗಳಲ್ಲಿ ತನ್ನ ಕಂಪನ್ನು ಪಸರಿಸಿದೆ. ಇಂತಹ ಯಕ್ಷಗಾನವನ್ನು ಯಾರೋ ಇದರ ಗಂಧ ಗಾಳಿ ಗೊತ್ತಿಲ್ಲದವರು ಮುಖಕ್ಕೆ ಹಬ್ಬದಲ್ಲಿ ದಿನಗಳಲ್ಲಿ ಬಣ್ಣ ಹಚ್ಚಿಕೊಂಡು ಬಾಡಿಗೆಗೆ ಸಿಗುವ ಯಕ್ಷಗಾನದ ವೇಷಭೂಷಣ ತೊಟ್ಟುಕೊಂಡು ಅಸಹ್ಯಕರವಾಗಿ ಕುಚೇಷ್ಟೆ ಮಾಡುತ್ತಾ ಭಿಕ್ಷಾಟನೆ ಮಾಡುವುದನ್ನ ಕಾಣುತ್ತಿದ್ದೇವೆ. ಇದನ್ನು ನಿಷೇಧಿಸುವಂತೆ ಮನವಿ ಮಾಡಲಾಗಿದೆ ಎಂದು ಪ್ರಕೋಷ್ಠದ ಸಂಚಾಲಕ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ವೇಷಗಳನ್ನು ಬಾಡಿಗೆ ಕೊಡುವವರು ಕೂಡ ಭಿಕ್ಷಾಟನೆ ಮಾಡುವ ಉದ್ದೇಶದಿಂದ ವೇಷ ಧರಿಸುವವರಿಗೆ ಬಾಡಿಗೆಗೆ ಕೊಡದೆ ಕಲೆಯ ಪಾವಿತ್ರ್ಯ ಕಾಪಾಡಲು ನೆರವಾಗಬೇಕೆಂದು ಮನವಿ ಮಾಡಿದ್ದಾರೆ.

error: Content is protected !!
Scroll to Top