60 ಪ್ರಶ್ನಾವಳಿಗಳ ಮೂಲಕ 7 ಕೋಟಿ ಕನ್ನಡಿಗರ ಸಮಗ್ರ ಮಾಹಿತಿ ಸಂಗ್ರಹ
ಬೆಂಗಳೂರು: ಭಾರಿ ವಿವಾದಕ್ಕೆ ಗುರಿಯಾಗಿರುವ ಸರ್ಕಾರದ ಜಾತಿ ಗಣತಿ (ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ) ಇಂದಿನಿಂದ ಪ್ರಾರಂಭವಾಗಲಿದೆ. ಹಲವು ಸಮುದಾಯಗಳ ವಿರೋಧ, ಅಸಮಾಧಾನ, ಆಕ್ಷೇಪ, ಆತಂಕ, ಗೊಂದಲದ ನಡುವೆಯೇ ಜಾತಿ ಗಣತಿ ರಾಜ್ಯಾದ್ಯಂತ ನಡೆಯಲಿದೆ.
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಾಡಿನ 7 ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದಿನಿಂದ ಅಕ್ಟೋಬರ್ 7ರವರೆಗೆ ಗಣತಿ ಮಾಡುವ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ 7 ಕೋಟಿ ಕನ್ನಡಿಗರಿಂದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಜಾತಿ ಗಣತಿಗಾಗಿ ಜನರಿಒಗೆ ಕೇಳಲು 60 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಈ ಪ್ರಶ್ನೆಗಳ ಮೂಲಕ ಜನರ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು.
ಜಾತಿ ಗಣತಿಗೆ ಹಿಂದುಳಿದ ವರ್ಗಗಳ ಆಯೋಗ 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಿದ್ದು, ಗಣತಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಗಣತಿ ಕಾರ್ಯವನ್ನು ಯಾವ ರೀತಿ ನಡೆಸಬೇಕು, ಯಾವೆಲ್ಲ ಮಾಹಿತಿಗಳನ್ನು ಸಂಗ್ರಹಿಸಬೇಕು ಎಂಬ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಿದೆ.
ಇಂದಿನಿಂದ ಮನೆ ಮನೆಗೆ ತೆರಳುವ ಗಣತಿದಾರರು ಹಿಂದುಳಿದ ವರ್ಗ ಈಗಾಗಲೇ ಸಿದ್ಧಪಡಿಸಿರುವ 60 ಪ್ರಶ್ನೆಗಳನ್ನು ಕೇಳಿ, ಆ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.
ಕ್ರಿಶ್ಚಿಯನ್ ಉಪಜಾತಿಗಳ ಹೆಸರನ್ನು ನಮೂದಿಸುವ ಕುರಿತು ಭುಗಿಲೆದ್ದಿದ್ದ ವಿರೋಧ ಹಿನ್ನೆಲೆಯಲ್ಲಿ 33 ಜಾತಿಗಳನ್ನು ಸರ್ಕಾರದ ಸಲಹೆ ಮೇರೆಗೆ ಆಯೋಗ ಕೈ ಬಿಟ್ಟಿದೆ. ಕ್ರಿಶ್ಚಿಯನ್ ಉಪಜಾತಿಗಳ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಸಚಿವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರಾಜ್ಯಪಾಲರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಎಲ್ಲ ಕಾರಣದಿಂದ ಇದೀಗ ಗೊಂದಲಕ್ಕೆ ಕಾರಣವಾದ ಕ್ರಿಶ್ಚಿಯನ್ ಉಪಜಾತಿಗಳನ್ನ ಕೈಬಿಡಲಾಗಿದೆ. ಈ ಮೂಲಕ ಕ್ರಿಶ್ಚಿಯನ್ ಉಪಜಾತಿ ನಮೂದಿನ ಕುರಿತಂತೆ ಎದ್ದಿರುವ ವಿವಾದಕ್ಕೆ ಸರ್ಕಾರ ತೆರೆ ಎಳೆಯುವ ಪ್ರಯತ್ನ ಮಾಡಿದೆ. ಜನರಿಗೆ ಇಚ್ಚೆ ಇದ್ದರೆ ಪಟ್ಟಿಯಿಂದ ಕೈಬಿಟ್ಟಿರೋ ಧರ್ಮ ಮತ್ತು ಜಾತಿ ಹೆಸರು ಬರೆಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.
























