ವಿಟ್ಲ: ಇಲ್ಲಿನ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಮುಚ್ಚಿದ ಕ್ವಾರಿಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಭಾನುವಾರ ಸಂಭವಿಸಿದೆ. ಕಬಕ ನಿವಾಸಿ ಹಸೈನ್ ಎಂಬವರ ಪುತ್ರ ಮುಹಮ್ಮದ್ ಅಜ್ಮನ್ (15) ಮೃತ ಬಾಲಕ ಎಂದು ಗುರುತಿಸಲಾಗಿದೆ. ಅಜ್ಮನ್ ಪುತ್ತೂರಿನ ಸಾಲ್ಮರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಅಜ್ಮನ್ ತನ್ನ ಸ್ನೇಹಿತರೊಂದಿಗೆ ಕಲ್ಲುಕ್ವಾರಿಯ ಬಳಿಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದ್ದು, ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೆಲ ಸಮಯದಿಂದ ಮುಚ್ಚಿದ್ದ ಈ ಕಲ್ಲು ಕ್ವಾರಿಯಲ್ಲಿ ನೀರು ತುಂಬಿಕೊಂಡಿತ್ತು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

