ರಾಜಕೀಯ ಒತ್ತಡದಿಂದ ಸುಳ್ಳು ಪ್ರಕರಣಗಳು ದಾಖಲು ಎಂದು ಆರೋಪ
ಮಂಗಳೂರು: ತನ್ನ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಇನ್ನೊಂದು ಪ್ರಕರಣ ದಾಖಲಾದ ಬೆನ್ನಿಗೆ ಮಹೇಶ್ ಶೆಟ್ಟಿ ತಿಮರೋಡಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಬಾಗಿಲು ತಟ್ಟಿದ್ದಾರೆ. ಪೊಲೀಸರು ತಮ್ಮ ಮೇಲೆ ತೀವ್ರ ದೌರ್ಜನ್ಯ ಎಸಗುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿ ಆಯೋಗಕ್ಕೆ ಅವರು ದೂರು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಬೆಂಬಲಿಗರ ಮೇಲೆ ದಾಖಲಾಗಿರುವ ಎಲ್ಲ ಎಫ್ಐಆರ್ಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕಳೆದ 13 ವರ್ಷಗಳಿಂದ ಹೋರಾಡುತ್ತಿರುವುದೇ ಈ ಕಿರುಕುಳಕ್ಕೆ ಕಾರಣ. ಇತ್ತೀಚೆಗೆ ಧರ್ಮಸ್ಥಳದ ದೇವಸ್ಥಾನವೊಂದನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಿ, ಅದನ್ನು ಜೈನ ಸಂಸ್ಥೆ ಎಂದು ಹೇಳುತ್ತಿರುವುದನ್ನು ತಾವು ಪ್ರಶ್ನಿಸಿದ್ದೇ ಈಗಿನ ಸಮಸ್ಯೆಗಳಿಗೆ ಮೂಲ ಕಾರಣ. ಬಿಜೆಪಿ ನಾಯಕರ ಬೆಂಬಲದಿಂದ ಹೀಗೆ ಮಾಡಲಾಗುತ್ತಿದೆ ಎಂದು ತಾವು ನೀಡಿದ ಹೇಳಿಕೆಯನ್ನೇ ಮುಂದಿಟ್ಟುಕೊಂಡು, ತಮ್ಮ ಮೇಲೆ ಪ್ರಕರಣಗಳ ಸರಮಾಲೆ ಆರಂಭವಾಯಿತು ಎಂದು ಅವರು ವಿವರಿಸಿದ್ದಾರೆ.
ಆಗಸ್ಟ್ 16, 2025ರಂದು ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ತಮ್ಮ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಯಿತು. ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ಕೇಳಿದ್ದರೂ, ಉತ್ತರ ನೀಡದೆ ಆಗಸ್ಟ್ 21ರಂದು ಏಳು ಪೊಲೀಸ್ ಜೀಪ್ಗಳು ಮತ್ತು ಎರಡು ವ್ಯಾನ್ಗಳಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಮನೆಗೆ ಇದು ಸಾರ್ವಜನಿಕವಾಗಿ ತಮಗೆ ಅವಮಾನ ಮಾಡುವ ಉದ್ದೇಶದಿಂದ ನಡೆಸಿದ ದಾಳಿಯಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಉಜಿರೆಯಿಂದ ಬ್ರಹ್ಮಾವರಕ್ಕೆ ಹೋಗುವಾಗ ತಮ್ಮ ಮೂವರು ಯುವ ಬೆಂಬಲ ಬೆಂಬಲಿಗರಿದ್ದ ವಾಹನ ಎಎಸ್ಪಿ ಅವರ ವಾಹನಕ್ಕೆ ಆಕಸ್ಮಿಕವಾಗಿ ತಗುಲಿದೆ. ಆದರೆ ಪೊಲೀಸರು ಇದನ್ನೇ ದೊಡ್ಡದು ಮಾಡಿ, ಆ ಯುವಕರ ಮೇಲೆ ಕೊಲೆ ಯತ್ನದ (ಐಪಿಸಿ 307) ಕೇಸ್ ಹಾಕಲು ಒತ್ತಡ ಹೇರಿದರು. ಅಷ್ಟೇ ಅಲ್ಲದೆ, ತಮ್ಮ ರಕ್ತದೊತ್ತಡ ಹೆಚ್ಚಾಗಿದ್ದರೂ ವೈದ್ಯರ ಸಲಹೆಯನ್ನು ನಿರ್ಲಕ್ಷಿಸಲಾಯಿತು ಮತ್ತು ರಾಜಕೀಯ ಪ್ರೇರಿತ ಹಳೆಯ ಕೇಸುಗಳನ್ನು ಮುಂದಿಟ್ಟು ಜಾಮೀನು ಕೂಡ ನಿರಾಕರಿಸಲಾಯಿತು ಎಂದು ಅವರು ದೂರಿದ್ದಾರೆ.
























