ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಿದ್ಧತೆ
ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯಲಿದೆ (ಎಸ್‌ಐಆರ್) ಎಂದು ಕರ್ನಾಟಕ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ. ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲ ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ.
ಹಿಂದಿನ ಮತದಾರರ ಪಟ್ಟಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ. ಭಾರತ ಸಂವಿಧಾನದ 324ನೇ ವಿಧಿಯ ಅಡಿ, ವಿಶೇಷ ತೀವ್ರ ಪರಿಷ್ಕರಣೆ ಸೂಕ್ತವೆಂದು ಭಾವಿಸಿ ಆದೇಶಿಸಲು ಇಸಿಐಗೆ ಅಧಿಕಾರ ನೀಡಲಾಗಿದೆ. ಆ ಪ್ರಕಾರ ಪರಿಷ್ಕರಣೆಗಾಗಿ ಇಸಿಐ ಎಸ್‌ಐಆರ್ ಘೋಷಿಸಿದೆ.
ಪ್ರತಿ ಭಾರತೀಯ ನಾಗರಿಕ ತನಗೆ ಸಂಬಂಧಿಸಿದ ವಿಧಾನಮಂಡಲ ನಿಗದಿಪಡಿಸಿದ ದಿನಾಂಕದಂದು ಕನಿಷ್ಠ 18 (ಹದಿನೆಂಟು) ವರ್ಷ ವಯಸ್ಸು ಹೊಂದಿರಬೇಕು. ವಾಸ ಸ್ಥಳದ ಕೊರತೆ, ಮಾನಸಿಕ ಅಸ್ವಸ್ಥತೆ, ಅಪರಾಧ ಅಥವಾ ಭ್ರಷ್ಟ, ಅಕ್ರಮಗಳ ಆಧಾರದ ಮೇಲೆ ಸಂವಿಧಾನ ಅಥವಾ ಸಂಬಂಧಿತ ಕ್ಷೇತ್ರ ನಿಗದಿಪಡಿಸಿರುವ ಯಾವುದೇ ಕಾನೂನು ಪ್ರಕಾರ ಅನರ್ಹನಾಗಿರದಿದ್ದಲ್ಲಿ, ಅಂತಹ ಪ್ರತಿ ವ್ಯಕ್ತಿಗೂ ಯಾವುದೇ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇರುತ್ತದೆ.
ಜನಸಂಖ್ಯಾ ಬದಲಾವಣೆ, ನಕಲಿ ಮತ್ತು ಅನರ್ಹ ಮತ ತಡೆಗಟ್ಟುವಿಕೆ, ಚುನಾವಣಾ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಅಗತ್ಯವಾಗಿದೆ. ಯಾವುದೇ ಅರ್ಹ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಡದಿರುವುದು ಮತ್ತು ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಸ್ಐಆರ್ನ ಪ್ರಮುಖ ಉದ್ದೇಶವಾಗಿದೆ.
























