ಬಂಗ್ಲೆಗುಡ್ಡೆ ಮಹಜರು ಬಳಿಕ ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು
ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಕೆಲವು ತಲೆಬುರುಡೆ ಮತ್ತು ಮೂಳೆಗಳು ಸಿಗುವುದರೊಂದಿಗೆ ಧರ್ಮಸ್ಥಳ ಶವ ಶೋಧ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ರಾಶಿರಾಶಿ ಕಳೇಬರ ಸಿಗುತ್ತದೆ ಎಂದು ವೀಡಿಯೋ ಹೇಳಿಕೆ ನೀಡಿದ ಬಳಿಕ ಎಸ್‌ಐಟಿ ಇಲ್ಲಿ ನಿನ್ನೆ ಮಹಜರು ಪ್ರಕ್ರಿಯೆ ನಡೆಸಿದೆ.
ನೇತ್ರಾವತಿ ನದಿ ದಡದಲ್ಲೆ ಇರುವ ಬಂಗ್ಲೆಗುಡ್ಡೆಯಲ್ಲಿ ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ನಿನ್ನೆ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. 13 ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ. ಈ ತಲೆಬುರುಡೆ ಮತ್ತು ಮೂಳೆಗಳ ವೈಜ್ಞಾನಿಕ ಪರೀಕ್ಷೆಯ ಫಲಿತಾಂಶದ ಮೇಲೆ ಮುಂದಿನ ತನಿಖೆಯ ಗತಿ ನಿರ್ಧಾರವಾಗಲಿದೆ.
ಪಾಯಿಂಟ್ 11ರ ಆಸುಪಾಸಿನಲ್ಲಿ ಭೂಮಿಯ ಮೇಲ್ಭಾಗದಲ್ಲೇ ಮಾನವನ ಮೂಳೆಗಳು ಪತ್ತೆಯಾಗಿವೆ. ಮೂಳೆ ಪತ್ತೆಯಾದ ಸ್ಥಳದಲ್ಲೇ ಬಟ್ಟೆಯ ತುಂಡುಗಳೂ ಪತ್ತೆಯಾಗಿವೆ. ಮೂಳೆಗಳನ್ನು ಪೈಪ್‌ಗಳಲ್ಲಿ ಸಂಗ್ರಹಿಸಿ, ಮಣ್ಣಿನ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಹೇಳಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಸದ್ಯ ಜೈಲು ಸೇರಿದ್ದಾನೆ. ಇದರ ನಡುವೆ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಆರೋಪಿಸಿದ್ದಾರೆ. ಇದೇ ಹೇಳಿಕೆ ಸಂಚಲನ ಸೃಷ್ಟಿ ಮಾಡಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿತ್ತು. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡಕ್ಕೆ ಪ್ರವೇಶ ಮಾಡಿದ್ದು ಶೋಧ ನಡೆಸಿದ್ದಾರೆ. ಅರಣ್ಯ ಇಲಾಖೆ ಅನುಮತಿ ನೀಡುತ್ತಿದ್ದಂತೆ 3 ತಂಡ ಮಾಡಿಕೊಂಡ ಎಸ್‌ಐಟಿ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿ ಕಾಡಿನೊಳಗೆ ಮತ್ತೆ ಮೂಳೆ, ಕಳೇಬರಗಳ ಶೋಧಕ್ಕೆ ಇಳಿದಿದೆ. ಎಸ್‌ಐಟಿ ಜತೆ 15 ಅರಣ್ಯ ಸಿಬ್ಬಂದಿ, ಗ್ರಾಮ ಪಂಚಾಯತ್‌ನ 8 ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಶೋಧಕ್ಕೆ ಇಳಿದಿದ್ದರು. ಹೀಗೆ ಐದು ಕಡೆ ಮೇಲ್ಮೈನಲ್ಲೇ ಶೋಧ ನಡೆಸಿದಾಗ ತಲೆಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ.
ತಿಮರೋಡಿ ವಿರುದ್ಧ ಕೇಸ್
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡಿದೆ. ಎಸ್‌ಪಿ ಸೈಮನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಆಗಸ್ಟ್ 26ರಂದು ಚಿನ್ನಯ್ಯನನ್ನು ತಿಮರೋಡಿಯ ನಿವಾಸಕ್ಕೆ ಕರೆದುಕೊಂಡು ಬಂದು ಎಸ್‌ಐಟಿ ಶೋಧಕಾರ್ಯ ನಡೆಸುವ ಸಂದರ್ಭ ಬಂದೂಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದವು.
25.5 ಇಂಚು ಉದ್ದದ ಮರದ ಹಿಡಿಕೆಯುಳ್ಳ 2 ತಲವಾರು, ಒಂದು ಬಂದೂಕು ಸೇರಿದಂತೆ 44 ವಸ್ತುಗಳನ್ನು ಎಸ್‌ಐಟಿ ವಶಪಡಿಸಿಕೊಂಡಿತ್ತು. ಈಗ ಆರ್ಮ್ಸ್ ಆಕ್ಟ್ 1959 ಸೆಕ್ಷನ್ 25(1),25 (1-A) ,24(1-B)(A)) ಅಡಿಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿದೆ.
























