ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ 75 ವರ್ಷ ತುಂಬಿದ್ದು, ಇದರ ಭಾಗವಾಗಿ ಬಿಜೆಪಿ ದೇಶಾದ್ಯಂತ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳಿಂದ ಹಿಡಿದು ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವ ತನಕ ವಿವಿಧ ರಾಜ್ಯಗಳು ನಾನಾ ಯೋಜನೆ ಜಾರಿ ಸೇರಿದಂತೆ ಅನೇಕ ಜನಪರವಾದ ಸೇವೆಗಳನ್ನು ಮಾಡಲಾಗುತ್ತದೆ.
ಪ್ರತಿವರ್ಷದಂತೆ ಸೆ.17ರಿಂದ ತೊಡಗಿ ಗಾಂಧಿ ಜಯಂತಿ ದಿನವಾದ ಅ.2ರ ತನಕ ಸೇವಾ ಪಾಕ್ಷಿಕ ನಡೆಯಲಿದೆ. ಸ್ವಚ್ಛತೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಬಿಜೆಪಿ ವತಿಯಿಂದ ಈ ಅವಧಿಯಲ್ಲಿ ಮಾಡಲಾಗುತ್ತದೆ. ಸೆ.17ರಿಂದ ಅ.2 (ಗಾಂಧಿ/ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ವರೆಗೆ ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಗಿಡನೆಡುವ ಅಭಿಯಾನ ಬಿಜೆಪಿ ಹಮ್ಮಿಕೊಂಡಿದೆ. ಬಿಜೆಪಿ ಯುವಮೋರ್ಚಾ 75 ನಗರಗಳಲ್ಲಿ ‘ನಮೋ ಯುವ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ಪ್ರತಿ ಕಡೆ 10000ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಮೋದಿ ಬುಧವಾರ ತಮ್ಮ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿರುತ್ತಾರೆ. ಇಲ್ಲಿನ ಧಾರ್ ಜಿಲ್ಲೆಯ ಭೈನ್ಸೋಲಾ ಗ್ರಾಮಕ್ಕೆ ಭೇಟಿ ನೀಡಲಿದ್ದು, ಮಹಿಳೆಯರು ಮತ್ತು ಕುಟುಂಬಗಳಿಗೆ ಆರೋಗ್ಯ ಮತ್ತು ಪೋಷಣೆಯನ್ನು ಆಧರಿಸಿದ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಮೋದಿ ಅವರ ಜನ್ಮದಿನದ ಹಿಂದಿನ ದಿನ ಮಂಗಳವಾರ ಪುಣೆಯಲ್ಲಿ ಸಂಸದ, ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ ಮೊಹೋಲ್ ಅವರು ನೇತೃತ್ವದಲ್ಲಿ ಡ್ರೋನ್ ಲೇಸರ್ ಶೋ ಆಯೋಜಿಸಲಾಗಿತ್ತು. ಇಲ್ಲಿ ಮೋದಿ ಅವರ ಕುರಿತು ಪ್ರದರ್ಶನ ನಡೆಯಿತು. ಬಿಹಾರದ ಗಯಾಜಿಯಲ್ಲಿ ನಡೆಯಲಿರುವ ಪಿತೃಪಕ್ಷ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆ ಎನ್ನಲಾಗಿದೆ.
ಟ್ರಂಪ್ ಶುಭಾಶಯ
ಕಳೆದ ಕೆಲ ಸಮಯದಿಂದ ಅಮೆರಿಕ ಮತ್ತು ಭಾರತ ನಡುವಿನೆ ಸಂಬಂಧ ಹದಗೆಟ್ಟಿದ್ದರೂ ಮೋದಿ ಹುಟ್ಟುಹಬ್ಬಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಟ್ರಂಪ್ಗೆ ಬೇಸರವಿದೆಅದೇ ಕಾರಣಕ್ಕೆ ಭಾರತಕ್ಕೆ ಶೇ.50ರಷ್ಟು ಸುಂಕ ವಿಧಿಸಿದ್ದಾರೆ. ಈ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಟ್ರಂಪ್ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅಧ್ಯಕ್ಷ ಟ್ರಂಪ್, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದ್ಭುತವಾದ ಸಂಭಾಷಣೆ ನಡೆಯಿತು. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ಪೋಸ್ಟ್
ಪ್ರಧಾನಿ ಮೋದಿ ಕೂಡ ಇದಕ್ಕೂ ಮುನ್ನ ಪ್ರಧಾನಿ ಮೋದಿ ಕೂಡ ಈ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅಧ್ಯಕ್ಷ ಟ್ರಂಪ್ಗೆ ಧನ್ಯವಾದ ಹೇಳುತ್ತಾ, ನಿಮ್ಮ ಕರೆ ಮತ್ತು ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮಂತೆಯೇ, ಭಾರತ-ಯುಎಸ್ಎ ನಡುವಿನ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಬರೆದಿದ್ದಾರೆ.
ಮರಳು ಶಿಲ್ಪ
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯಲ್ಲಿ ಪ್ರಧಾನಿ ಮೋದಿಯವರ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಪ್ರಧಾನಿ ಮೋದಿ 1950ರ ಸೆಪ್ಟೆಂಬರ್ 17 ರಂದು ಗುಜರಾತ್ನ ಸಣ್ಣ ಪಟ್ಟಣವಾದ ವಡ್ನಗರದಲ್ಲಿ ಜನಿಸಿದರು. ಅವರ ಬಾಲ್ಯವು ತೀವ್ರ ಬಡತನದಲ್ಲಿ ಕಳೆದಿತು. ಅವರು ತಮ್ಮ ತಂದೆ ದಾಮೋದರದಾಸ್ ಮುಲ್ಚಂದ್ ಮೋದಿ ಅವರೊಂದಿಗೆ ವಡ್ನಗರ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದರು. ಅವರ ತಾಯಿ ಹೀರಾಬೆನ್ ಒಬ್ಬ ಸಾಮಾನ್ಯ ಗೃಹಿಣಿ. ಒಟ್ಟು ನಾಲ್ಕು ಮಕ್ಕಳಲ್ಲಿ ಪ್ರಧಾನಿ ಮೋದಿ ಮೂರನೇಯವರು.
























