ಮತ್ತೊಮ್ಮೆ ಭಾರತ-ಪಾಕಿಸ್ತಾನ ಸಾಧ್ಯತೆಯಿದೆಯೇ?

ಯುಎಇ ವಿರುದ್ದ ಗೆದ್ದರೆ ಸೆ.21ರಂದು ಇನ್ನೊಂದು ಹೈವೋಲ್ಟೇಜ್‌ ಪಂದ್ಯ

ದುಬೈ : ಸೆಪ್ಟೆಂಬರ್ 14ರಂದು ನಡೆದ ಏಷ್ಯಾಕಪ್ 2025ರ ಗುಂಪು ಹಂತದಲ್ಲಿ ಪಾಕಿಸ್ತಾನ ಜೊತೆಗಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತಕ್ಕೆ ಮತ್ತೊಮ್ಮೆ ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ. ಭಾನುವಾರದ ಗೆಲುವಿನೊಂದಿಗೆ ಭಾರತ ತಂಡ ಸೂಪರ್ -4 ಸುತ್ತಿನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಸೆ.17ರಂದು ಪಾಕಿಸ್ತಾನ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಫಲಿತಾಂಶ ಭಾರತ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಮುಖಾಮುಖಿಯನ್ನು ಖಚಿತಪಡಿಸುತ್ತದೆ.

ಪಾಕಿಸ್ತಾನ ತಂಡ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಆಡಬೇಕಾಗಿದೆ. ಈ ಪಂದ್ಯವನ್ನು ಗೆದ್ದರೆ ಪಾಕಿಸ್ತಾನ ಸೂಪರ್-4ಕ್ಕೆ ಅರ್ಹತೆ ಪಡೆಯಬಹುದು. ಇದು ಸಾಧ್ಯವಾದರೆ ಸೆಪ್ಟೆಂಬರ್ 21ರಂದು ನಡೆಯಲಿರುವ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಈ ಸೂಪರ್-4 ಸುತ್ತಿನ ಪಂದ್ಯವು ಗ್ರೂಪ್-ಎಯಿಂದ ಅರ್ಹತೆ ಪಡೆಯುವ ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಭಾರತ ಈಗಾಗಲೇ ಈ ಸುತ್ತಿಗೆ ಅರ್ಹತೆ ಪಡೆದಿದ್ದು, ಪಾಕಿಸ್ತಾನದ ಪ್ರದರ್ಶನದ ಮೇಲೆ ಅದರ ಸ್ಥಾನ ಖಚಿತವಾಗಲಿದೆ.





















































 
 

ಸೂಪರ್-4 ಸುತ್ತಿನಲ್ಲಿ ಮಾತ್ರವಲ್ಲ, ಎರಡೂ ತಂಡಗಳು ಫೈನಲ್‌ನಲ್ಲೂ ಮುಖಾಮುಖಿಯಾಗಬಹುದು. ಸೂಪರ್-4 ಸುತ್ತಿನಲ್ಲಿ ಎಲ್ಲ ತಂಡಗಳು ತಲಾ 3 ಪಂದ್ಯಗಳನ್ನು ಆಡುತ್ತವೆ ಮತ್ತು ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಟಾಪ್-2ರಲ್ಲಿ ಸ್ಥಾನ ಪಡೆದರೆ ಪ್ರಶಸ್ತಿ ಪಂದ್ಯದಲ್ಲಿಯೂ ಮುಖಾಮುಖಿಯಾಗಬಹುದು. ಆದಾಗ್ಯೂ ಏಷ್ಯಾಕಪ್ ಇತಿಹಾಸದಲ್ಲಿ, ಇಲ್ಲಿಯವರೆಗೆ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಒಂದೇ ಒಂದು ಪಂದ್ಯವೂ ನಡೆದಿಲ್ಲ.

ರೆಫರಿ ವಿರುದ್ಧ ಪಾಕ್‌ ಕಿಡಿ

ಭಾರತ ಹಾಗೂ ಪಾಕಿಸ್ತಾನ ಮೊದಲ ಪಂದ್ಯದ ಹ್ಯಾಂಡ್‌ಶೇಕ್ ವಿವಾದ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರ ಕ್ರೀಡಾ ಸ್ಫೂರ್ತಿಯ ಬಗ್ಗೆ ಪ್ರಶ್ನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಆ ಬಳಿಕ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಈ ವಿವಾದಕ್ಕೆಲ್ಲ ಕಾರಣ ಎಂದು ಐಸಿಸಿಗೆ ದೂರು ನೀಡಿದೆ. ಆ ದೂರಿನಲ್ಲಿ ಮ್ಯಾಚ್ ರೆಫರಿಯನ್ನು ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದೆ. ಇದೀಗ ಆಂಡಿ ಪೈಕ್ರಾಫ್ಟ್ ಅವರನ್ನು ಪಂದ್ಯಾವಳಿಯಿಂದ ಹೊರಹಾಕದಿದ್ದರೆ ಏಷ್ಯಾಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಸವಾಲು ಹಾಕಿದೆ.

ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಯಾವುದೇ ರೋಮಾಂಚಕ ಕ್ಷಣಗಳು ಇರಲಿಲ್ಲ. ಪಂದ್ಯ ಮುಗಿದ ಬಳಿಕ ನಡೆದ ಘಟನೆಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ಪಂದ್ಯ ಮುಗಿದ ನಂತರ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದೆ ಡ್ರೆಸ್ಸಿಂಗ್ ರೂಮ್ ಸೇರಿಕೊಂಡರು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮುಜುಗರಕ್ಕೀಡು ಮಾಡಿದೆ.

ನಿಜವಾದ ವಿವಾದ ಇದಕ್ಕೂ ಮೊದಲೇ ಆರಂಭವಾಗಿತ್ತು. ಟಾಸ್ ಸಮಯದಲ್ಲಿ ಪೈಕ್ರಾಫ್ಟ್ ಎರಡೂ ತಂಡಗಳ ನಾಯಕರನ್ನು ಕೈಕುಲುಕದಂತೆ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿದೆ. ಈ ವಿಷಯದ ಬಗ್ಗೆ ಪಾಕಿಸ್ತಾನ ಮಂಡಳಿಯು ರೆಫರಿಯ ವಿರುದ್ಧ ಅವರನ್ನು ಪಂದ್ಯಾವಳಿಯಿಂದ ತೆಗೆದುಹಾಕಬೇಕೆಂದು ಐಸಿಸಿಗೆ ದೂರು ನೀಡಿದೆ. ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ, ಪೈಕ್ರಾಫ್ಟ್ ರೆಫರಿಯಾಗಿರುವ ಪಂದ್ಯಾವಳಿಯ ಪ್ರತಿಯೊಂದು ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ.

ಈ ದೂರಿನ ಬಗ್ಗೆ ಐಸಿಸಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನದ ಮುಂದಿನ ಪಂದ್ಯ ಯುಎಇ ವಿರುದ್ಧವಾಗಿದ್ದು, ಪೂರ್ವ ನಿರ್ಧರಿಸಿದ ವೇಳಾಪಟ್ಟಿಯ ಪ್ರಕಾರ ಪೈಕ್ರಾಫ್ಟ್ ಆ ಪಂದ್ಯದಲ್ಲಿ ರೆಫರಿಯಾಗಿರುತ್ತಾರೆ. ಈಗ ಐಸಿಸಿ ಪೈಕ್ರಾಫ್ಟ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪಾಕಿಸ್ತಾನ ತಂಡ ಈ ಪಂದ್ಯದಿಂದ ಹೊರಗುಳಿಯಬಹುದು.

error: Content is protected !!
Scroll to Top