ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಿಂದ 250 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ | ಸಂಘದ ಮಹಾಸಭೆ

ಪುತ್ತೂರು: ಒಂದು ಸಂಸ್ಥೆ 250 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ 31 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುವುದು ಸುಲಭದ ಕೆಲಸವಲ್ಲ. ಇಂದಿನ ದಿನಗಳಲ್ಲಿ ವ್ಯವಹಾರ ಮಾಡುವುದು ಎಷ್ಟು ಕಷ್ಟ, ಅದರಲ್ಲಿ ಎಷ್ಟು ಮಂದಿಯ ಶ್ರಮವಿದೆ, ರಾಜ್ಯದಲ್ಲಿ ಇಂತಹ ಕೆಲಸವನ್ನು ಎಷ್ಟು ಸಂಸ್ಥೆಗಳು ಮಾಡುತ್ತಿವೆ ಎಂಬುವುದನ್ನು ಹೆತ್ತವರು ತಿಳಿದುಕೊಳ್ಳಬೇಕು. ಇಷ್ಟೊಂದು ಮಂದಿ ಮಕ್ಕಳಿಗೆ ಸಹಾಯಧನ ನೀಡಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿರುವುದು ಸವಣೂರು ಸೀತಾರಾಮ ರೈ ಅವರಿಗೆ ಪರಿಸರದ ಮಕ್ಕಳ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಹೇಳಿದರು.

ಅವರು ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್‌ನ ‘ಸನ್ನಿಧಿ ಹಾಲ್’ನಲ್ಲಿ ನಡೆದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನ ಸಂಘದ ಶಾಖೆಗಳ ವ್ಯಾಪ್ತಿಯ ಆಯ್ದ ಸರ್ಕಾರಿ ಶಾಲೆಗಳಲ್ಲಿ 7 ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ 250 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ -ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಹಕಾರಿ ಬ್ಯಾಂಕ್‍ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಂಘ ಸಂಸ್ಥೆಗಳು ಎಷ್ಟೇ ಬೆಳೆದರೂ ಈ ರೀತಿ ಸಹಾಯಧನ ನೀಡಲು ಯಾರೂ ಬಯಸುವುದಿಲ್ಲ. ಆದರೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಹೆಸರಿಗೆ ಮಾತ್ರ ‘ಆದರ್ಶ’ಅಲ್ಲದೆ ಸಹಾಯಧನ ನೀಡಿ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದರಲ್ಲೂ ಸಮಾಜಕ್ಕೆ ಆದರ್ಶವಾಗಿದೆ. ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರ ಮನಸ್ಸು ಮತ್ತು ಧ್ಯೇಯ ಉತ್ತಮವಾಗಿದ್ದು, ಇದರಿಂದಾಗಿಯೇ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.





















































 
 

ಮುಖ್ಯ ಅತಿಥಿಯಾಗಿ ಕೆಯ್ಯೂರಿನ ಮಹಿಮರ್ದಿನಿ-ದುರ್ಗಾಮರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಎ.ಕೆ. ಮಾತನಾಡಿ, ಈ ಸಂಘವು ತನ್ನ ಹೆಸರಿನಲ್ಲಿರುವ ಆದರ್ಶವನ್ನು ಮೈಗೂಡಿಸಿಕೊಂಡು ಬೆಳೆಯುವ ಜತೆಗೆ ಮಕ್ಕಳ ಶಿಕ್ಷಣದ ಬೆಳವಣಿಗೆಗೂ ಕಾರಣವಾಗಿದೆ ಎಂದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಾನು ಸುಳ್ಯದ ಸರ್ಕಾರಿ ಶಾಲೆಯಲ್ಲಿ ಕಲಿತವನು. ತನ್ನ ತಂದೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದವರು. ಕಷ್ಟ-ಕಾರ್ಪಣ್ಯಗಳ ನಡುವೆ ಬೆಳೆದ ನನಗೆ ಈಗ ದೇವರು ಬಹಳಷ್ಟು ಕೊಟ್ಟಿದ್ದಾರೆ. ಅದರಲ್ಲಿನ ಒಂದಾಂಶವನ್ನು ಸಮಾಜಕ್ಕೆ ಅರ್ಪಿಸುತ್ತಾ ಬಂದಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಪ್ರತೀ ವರ್ಷ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ೨೫೦ ಮಕ್ಕಳಿಗೆ ಸಹಾಯಧನ ನೀಡುತ್ತಾ ಬರಲಾಗುತ್ತಿದ್ದು, ತನ್ನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ವೇತನದ ವ್ಯವಸ್ಥೆ ಮಾಡಿಕೊಂಡಿದ್ದೇನೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಸಂಘದ ನಿರ್ದೇಶಕರಾದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಕೀಲ ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ, ಸಂಘದ ನಿರ್ದೇಶಕರಾದ ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು,ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಎನ್.ರಾಮಯ್ಯ ರೈ ಕೆದಂಬಾಡಿ, ಸೀತಾರಾಮ ಶೆಟ್ಟಿ ಬಿ.ಮಂಗಳೂರು, ಚಿಕ್ಕಪ್ಪ ನಾಕ್ ಅರಿಯಡ್ಕ, ಪೂರ್ಣೀಮಾ ಎಸ್.ಆಳ್ವ, ಮಹಾದೇವ ಎಂ.ಮಂಗಳೂರು, ಯಮುನಾ ಎಸ್.ರೈ, ರಶ್ಮಿ ಎಸ್.ರೈ ಉಪಸ್ಥಿತರಿದ್ದರು.

ಕೇಂದ್ರ ಕಚೇರಿಯ ಸಿಬ್ಬಂದಿ ಶ್ರಮಿತಾ ಕೆ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಸಂಘದ ಪಂಜ ಶಾಖೆಯ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ ಮತ್ತು ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ನಿರೂಪಿಸಿದರು.

error: Content is protected !!
Scroll to Top