ಇಂದು ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

2023ರಿಂದೀಚೆಗೆ ಹಿಂಸಾಚಾರದಿಂದ ನಲುಗಿರುವ ಮಣಿಪುರ

ನವದೆಹಲಿ : 2023ರಿಂದೀಚೆಗೆ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಜನಾಂಗೀಯ ಹಿಂಸಾಚರಕ್ಕೆ ಕಣಿವೆ ರಾಜ್ಯ ಮಣಿಪುರ ಸಂಪೂರ್ಣ ನಲುಗಿಹೋಗಿದೆ. ಇದರ ನಡುವೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ. ಆ ಮೂಲಕ ಮಣಿಪುರಕ್ಕೆ ಪ್ರಧಾನಿ ಮೋದಿ ಏಕೆ ಹೋಗುತ್ತಿಲ್ಲ ಎಂಬ ವಿಪಕ್ಷಗಳ ನಿರಂತರ ಆರೋಪಗಳ ನಡುವೆ ಭೇಟಿ ನೀಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಿಜೊರಾಂನ ಮೊದಲ ರೈಲು ಲೈನ್‌ ಲೋಕಾರ್ಪಣೆ ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ಮೋದಿ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.

ಕುಕಿ ಸಮುದಾಯ ಹೆಚ್ಚಿರುವ ಮಣಿಪುರದ ಚುರಚಂದ್​ಪುರಕ್ಕೆ ಮೊದಲು ಭೇಟಿ ನೀಡಲಿರುವ ಮೋದಿ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ. ಬಳಿಕ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಇದಾದ ನಂತರ ಮೈತೀಸ್ ಬಹುಸಂಖ್ಯಾತರಾಗಿರುವ ಇಂಫಾಲಕ್ಕೂ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲೂ ಒಟ್ಟು 8,500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.





















































 
 

ಮೋದಿ ಸ್ವಾಗತಕ್ಕೆ ಮಣಿಪುರದಲ್ಲಿ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಇದಕ್ಕೆ ಕುಕಿ-ಝೋ ಸಮುದಾಯದ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಣ್ಣಲ್ಲಿ ನೀರು ತುಂಬಿಕೊಂಡು ನೃತ್ಯ ಮಾಡಲು ಸಾಧ್ಯವಿಲ್ಲ ಎಂದಿವೆ. ಮೋದಿ ಭೇಟಿ ಹಿನ್ನೆಲೆ ಮಣಿಪುರದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಣಿಪುರ ಮುಖ್ಯಮಂತ್ರಿಯಾಗಿದ್ದ ಎನ್ ಬಿರೇನ್ ಸಿಂಗ್ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿದೆ. 2027 ರವರೆಗೆ ಅಧಿಕಾರಾವಧಿ ಹೊಂದಿದ್ದ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ. ಈ ಮಧ್ಯೆ ಮೋದಿ ಭೇಟಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ರಾಹುಲ್ ಗಾಂಧಿ ವ್ಯಂಗ್ಯ

ಮೋದಿಯವರ ಮಣಿಪುರ ಭೇಟಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮಣಿಪುರದಲ್ಲಿ ಬಹಳ ದಿನಗಳಿಂದ ಸಮಸ್ಯೆ ಇದೆ. ಅವರು ಈಗ ಅಲ್ಲಿಗೆ ಹೋಗುತ್ತಿರುವುದು ಒಳ್ಳೆಯದು. ಆದರೆ ದೇಶದ ಪ್ರಮುಖ ಸಮಸ್ಯೆ ‘ವೋಟ್ ಚೋರಿ’. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ನಾವು ಕರ್ನಾಟಕದ ಬಗ್ಗೆ ಸಾಕ್ಷ್ಯ ನೀಡಿದ್ದೇವೆ. ಎಲ್ಲ ಕಡೆ ಜನ ವೋಟ್ ಚೋರ್ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

error: Content is protected !!
Scroll to Top