ಸುಶೀಲಾ ಕರ್ಕಿ ನೇಪಾಳದ ಹೊಸ ಪ್ರಧಾನಮಂತ್ರಿ

ದಂಗೆಯ ಬಳಿಕ ಮಧ್ಯಂತರ ಸರ್ಕಾರ ರಚನೆ

ಕಾಠ್ಮಂಡು : ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು ನೇಪಾಳ ದೇಶದ ಮೊದಲ ಮಹಿಳಾ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಹುದ್ದೆಗೆ ಸ್ಪರ್ಧಿಗಳೆಂದು ಪರಿಗಣಿಸಲಾಗಿದ್ದ ಕುಲ್ಮನ್ ಘಿಸಿಂಗ್ ಮತ್ತು ಸುಡಾನ್ ಗುರುಂಗ್ ಸೇರಿದಂತೆ ಅನೇಕ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಅವರು ಪ್ರಮಾಣವಚನ ಸ್ವೀಕರಿಸಿದರು.

ದೇಶದ ಜೆನ್- ಝಡ್ ನೇತೃತ್ವದ ತೀವ್ರ ಪ್ರತಿಭಟನೆ ನಂತರ ನೇಪಾಳದ ಪ್ರಧಾನಿ ಹಾಗೂ ಅಧ್ಯಕ್ಷರು ರಾಜೀನಾಮೆ ನೀಡಬೇಕಾಯಿತು. ಇದರಿಂದ ಸರ್ಕಾರ ಪತನವಾಯಿತು, ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿದ್ದು, ಈ ಸರ್ಕಾರದ ಮುಖ್ಯಸ್ಥರಾಗಿ ಸುಶೀಲಾ ಕರ್ಕಿ ನೇತೃತ್ವ ವಹಿಸಿಕೊಂಡಿದ್ದಾರೆ.





















































 
 

ಪ್ರತಿಭಟನಾಕಾರರು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ 73 ವರ್ಷದ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ನಂತರ ಸಂಸತ್ತನ್ನು ವಿಸರ್ಜಿಸಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಬೇಕೆಂಬ ಪ್ರತಿಭಟನಾಕಾರರ ಬೇಡಿಕೆಗಳನ್ನು ಅಂಗೀಕರಿಸಲಾಯಿತು. ಪ್ರಮಾಣ ವಚನ ಸಮಾರಂಭಕ್ಕೆ ಸಂಸತ್ತಿನ ಸ್ಪೀಕರ್ ಮತ್ತು ರಾಷ್ಟ್ರೀಯ ಸಭೆಯ ಅಧ್ಯಕ್ಷರನ್ನು ಸಹ ಕರೆಯಲಾಗಿತ್ತು.

ನೇಪಾಳದ ಅಧ್ಯಕ್ಷರ ನಿವಾಸವಾದ ಶೀತಲ್ ನಿವಾಸ್‌ನಲ್ಲಿ ಸುಶೀಲಾ ಕರ್ಕಿ ಅವರಿಗೆ ಅಧ್ಯಕ್ಷ ಪೌಡೆಲ್ ಪ್ರಮಾಣವಚನ ಬೋಧಿಸಿದರು. ಸುಶೀಲಾ ಕರ್ಕಿ ಜೊತೆಗೆ, ಕಠ್ಮಂಡು ಮೇಯರ್ ಬಾಲೇಂದ್ರ ಶಾ, ವಿದ್ಯುತ್ ಮಂಡಳಿಯ ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್, ಧರಣ್‌ನ ಮೇಯರ್ ಹರ್ಕಾ ರಾಜ್ ಸಂಪಂಗ್ ರೈ, ಅಕಾ ಹರ್ಕಾ ಸಂಪಂಗ್ ಸೇರಿದಂತೆ ಇತರ ಮೂರು ಹೆಸರುಗಳನ್ನು ಸಹ ಪ್ರಧಾನಿ ಹುದ್ದೆಗೆ ಪರಿಗಣಿಸಲಾಗಿತ್ತು. ಆದರೆ, ಅಂತಿಮವಾಗಿ ಸುಶೀಲಾ ಕರ್ಕಿ ಪರ ಮತಗಳು ಹೆಚ್ಚು ಬಂದಿದ್ದರಿಂದ ಅವರನ್ನು ಆಯ್ಕೆ ಮಾಡಲಾಯಿತು.

error: Content is protected !!
Scroll to Top