ಪುತ್ತೂರು: ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಪರಿಹರಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಎನ್‌ಎಸ್‌ಎಸ್ ಚಟುವಟಿಕೆಗಳು ಕೇವಲ ಪಠ್ಯೇತರ ಚಟುವಟಿಕೆಗಳಲ್ಲ, ಬದಲಾಗಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಉಜಿರೆ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಹೇಳಿದರು.
ಅವರು ಶುಕ್ರವಾರ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ನಡೆದ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಪ್ರಿನ್ಸಿಪಾಲ್ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ, ಮಾನವಕುಲಕ್ಕೆ ಸೇವೆ ಸಲ್ಲಿಸುವುದು ಅತ್ಯಂತ ಶ್ರೇಷ್ಠ ಕಾರ್ಯ. ಸೇವೆಯು ಕೇವಲ ಪ್ರದರ್ಶನಕ್ಕಾಗಲ್ಲ, ಬದಲಾಗಿ ಹೃದಯಪೂರ್ವಕವಾಗಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಚಂದ್ರಶೇಖರ್ ಕೆ. ಪ್ರಸ್ತಾವಿಕವಾಗಿ ಮಾತನಾಡಿ, ಯಾವುದೇ ವೈಫಲ್ಯವನ್ನು ಯಶಸ್ಸಿಗೆ ಮೆಟ್ಟಿಲು ಎಂದು ಪರಿಗಣಿಸಬೇಕು. ಜೀವನದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ ಸಾಧ್ಯ ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಪುಷ್ಪ ಎನ್. ಸ್ವಾಗತಿಸಿ, ವಿದ್ಯಾರ್ಥಿನಿ ಜಿ. ಲವಿಕ ವಂದಿಸಿದರು. ಎನ್ ಎಸ್ ಎಸ್ ವಿದ್ಯಾರ್ಥಿಗಳಾದ ಅಪರ್ಣ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸುಷ್ಮಾ ವಾಗ್ಲೆ ಕೆ ವೈ ನಿರೂಪಿಸಿದರು. ಕಾಲೇಜಿನ ಉಪಪ್ರಿನ್ಸಿಪಾಲ್ ಡಾ. ವಿಜಯಕುಮಾರ ಎಂ., ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ, ಯಕ್ಷಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಧಾಕೃಷ್ಣ ಗೌಡ ವಿ., ಉಪನ್ಯಾಸಕರಾದ ಡಾ. ನಾರ್ಬಟ್ ಮಸ್ಕರೇನಸ್, ಧನ್ಯ ಪಿ.ಟಿ. ಉಪಸ್ಥಿತರಿದ್ದರು.
























