ಹೈದರಾಬಾದ್: ಮಹಿಳೆಯನ್ನು ಕಟ್ಟಿ ಹಾಕಿ, ಪ್ರೆಶರ್ ಕುಕ್ಕರ್‌ನಿಂದ ಹಲ್ಲೆ ನಡೆಸಿ, ಚಾಕು ಮತ್ತು ಕತ್ತರಿ ಬಳಸಿ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಹೈದರಾಬಾದ್‌ನ ಐಟಿ ಹಬ್ ಸೈದರಾಬಾದ್ ಸ್ಟಾಕ್ ಲೇನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮೃತರನ್ನು ರೇಣು ಅಗರ್ವಾಲ್ (50) ಎಂದು ಗುರುತಿಸಲಾಗಿದೆ. ಈ ಕೃತ್ಯವನ್ನು ಇಬ್ಬರು ಆರೋಪಿಗಳು ನಡೆಸಿದ್ದು, ಕೊಲೆ ಮಾಡಿದ ಬಳಿಕ ಅದೇ ಮನೆಯಲ್ಲಿ ಸ್ನಾನ ಮಾಡಿ, ರಕ್ತದ ಕಲೆಗಳಿದ್ದ ಬಟ್ಟೆಯನ್ನು ಹತ್ಯೆ ನಡೆಸಿದ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ರೇಣು ಅವರು ತಮ್ಮ ಪತಿ ಮತ್ತು ಪುತ್ರ ಜೊತೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅವರಿಬ್ಬರೂ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಂಜೆ ವೇಳೆಗೆ ರೇಣು ಅವರಿಗೆ ಪತಿ ಕರೆ ಮಾಡಿದ್ದು, ಉತ್ತರಿಸದ ಕಾರಣ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ರೇಣು ಅವರನ್ನು ಕೊಂದು ಮನೆಯಲ್ಲಿದ್ದ 40 ಗ್ರಾಂ ಚಿನ್ನ ಮತ್ತು ಒಂದೂವರೆ ಲಕ್ಷ ರೂ. ಗಳನ್ನು ದೋಚಿದ್ದಾರೆ. ರೇಣು ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಮತ್ತು ಇನ್ನೊಂದು ಮನೆಯ ಕೆಲಸದಾತ ಈ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹರ್ಷ ಮತ್ತು ರೌಶನ್ ಶಂಕಿತರ ಹೆಸರಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
























