ಜೈಲು ವಾಸದಿಂದ ಕಂಗೆಟ್ಟು ಹೋಗಿರುವ ನಟ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಇಂದು ಜಡ್ಜ್ ಎದುರು ನನಗೆ ವಿಷವನ್ನಾದರೂ ಕೊಡಿ ಎಂದು ಅಂಗಲಾಚಿದ ಘಟನೆ ಸಂಬವಿಸಿದೆ. ದರ್ಶನ್‌ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸವಲತ್ತು ಸಿಗುತ್ತಿಲ್ಲ. ಇದರಿಂದ ಅವರು ಹೈರಾಣವಾಗಿ ಹೋಗಿದ್ದಾನೆ. ಈ ಕಾರಣದಿಂದ ‘ನನಗೆ ವಿಷ ನೀಡಲು ಆದೇಶಿಸಿ’ ಎಂದು ಜಡ್ಜ್ ಎದುರೇ ಕೇಳಿದ್ದಾನೆ. ದರ್ಶನ್ ಬೇಡಿಕೆ ಕೇಳಿ ಜಡ್ಜ್ ಒಮ್ಮೆ ಶಾಕ್ ಆಗಿ ‘ಹಾಗೆಲ್ಲ ಕೇಳಬಾರದು’ ಎಂದು ಜಡ್ಜ್ ದರ್ಶನ್‌ಗೆ ಕಿವಿ ಮಾತು ಹೇಳಿದ್ದಾರೆ.
ಸುಪ್ರೀಂಕೋರ್ಟ್ ದರ್ಶನ್ ಜಾಮೀನು ರದ್ದು ಮಾಡುವಾಗ ಅವನಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸವಲತ್ತು ಸಿಗಬಾರದು ಎಂದು ಎಚ್ಚರಿಸಿತ್ತು. ಹೀಗಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ನ್ನು ಇಡಲಾಗಿದೆ. ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಕಠಿಣ ನಿಯಮಗಳಿಂದ ನಟನಿಗೆ ನರಕಯಾತನೆ ಉಂಟಾಗುತ್ತಿದೆ.
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ವಿಡಿಯೋ ಕಾಲ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾಗಿ ‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿದ್ದಾನೆ. ಆಗ ಜಡ್ಜ್ ‘ಹಾಗೆಲ್ಲಾ ನೀವು ಕೇಳುವಂತಿಲ್ಲ’ ಎಂದು ಹೇಳಿದ್ದಾರೆ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ.
























