ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನ 8 ದೇಶಗಳು, 19 ಪಂದ್ಯ
ದುಬೈ: ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ‘ಎ’ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್ ‘ಬಿ’ ಗುಂಪಿನಲ್ಲಿವೆ. ಪ್ರತಿ ತಂಡ ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿದೆ. ಗುಂಪಿನ ಅಗ್ರ 2 ತಂಡಗಳು ಸೂಪರ್ 4 ಹಂತ ಪ್ರವೇಶಿಸಲಿವೆ. ಸೂಪರ್ 4ನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಫೈನಲ್ಗೆ ಅರ್ಹತೆ ಪಡೆಯಲಿವೆ.
ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದು ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದರೆ 3 ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಸೆ.15ರ ಯುಎಇ-ಒಮಾನ್(ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ದುಬೈ ಕ್ರೀಡಾಂಗಣದಲ್ಲಿ 11 ಪಂದ್ಯ, ಅಬುಧಾಬಿಯಲ್ಲಿ 8 ಪಂದ್ಯ ನಿಗದಿಯಾಗಿವೆ.
ಭಾರತ-ಪಾಕಿಸ್ತಾನ ಮುಖಾಮುಖಿ
ಪಹಲ್ಗಾಮ್ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕ್ ತಂಡಗಳು ತಂಡಗಳು ಮುಖಾಮುಖಿಯಾಗಲಿವೆ. ಒಂದಲ್ಲ ಮೂರು ಬಾರಿ ಇತ್ತಂಡಗಳು ಕಾದಾಟ ನಡೆಸುವ ಸಾಧ್ಯತೆಯಿದೆ. ಸೆ.14ರಂದು ಗುಂಪು ಹಂತದಲ್ಲಿ ಮೊದಲ ಬಾರಿಗೆ ಸೆಣಸಾಟ ನಡೆಸಲಿವೆ. ಒಂದು ವೇಳೆ ಗುಂಪು ಹಂತದಲ್ಲಿ ಗೆದ್ದು ಸೂಪರ್ 4 ಪ್ರವೇಶಿಸಿದರೆ ಅಲ್ಲೂ ಕಾದಾಟ ನಡೆಸಬೇಕಾಗುತ್ತದೆ. ಸೂಪರ್ 4ರಲ್ಲಿ ಅಗ್ರ ಸ್ಥಾನ ಪಡೆದರೆ ಫೈನಲ್ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಭಾರತ ತಂಡ : ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಆರ್ಶದೀಪ್ ಸಿಂಗ್, ಅಭಿಷೇಕ್ ಶರ್ಮ, ತಿಲಕ್ ವರ್ಮ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್).
























