ವಾಟ್ಸಪ್ ಗ್ರೂಪ್ ನಂಬಿ ಜೀವಮಾನದ ಉಳಿತಾಯವನ್ನು ಕಳೆದುಕೊಂಡ ವ್ಯಕ್ತಿ
ಮಂಗಳೂರು: ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1.14 ಕೋ. ರೂ. ವಂಚಿಸಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ದೂರುದಾರ ತನ್ನ ಜೀವಮಾನದ ಉಳಿತಾಯವನ್ನೆಲ್ಲ ವಂಚಕರ ಕೈಗಿತ್ತು ಈಗ ಪರಿತಪಿಸುತ್ತಿದ್ದಾರೆ. ಜು.14ರಂದು ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಸ್ಟಾಕ್ ಎಕ್ಸ್‌ಚೇಂಜ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಿ ಷೇರುಗಳಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದೆ ಭಾರಿ ಲಾಭ ಗಳಿಸಬಹುದು ಎಂದು ಹೇಳಿದ್ದ.
ನಂತರ ದೂರುದಾರ ಆ.11ರಂದು ಈ ಗ್ರೂಪ್‌ನಲ್ಲಿ ಕ್ರಿಸ್ಟಿನ್ ಎಂಬ ಮಹಿಳೆಯನ್ನು ಸಂಪರ್ಕಿಸಿ ಹೂಡಿಕೆ ಬಗ್ಗೆ ವಿಚಾರಿಸಿದ್ದರು. ಕ್ರಿಸ್ಟಿನ್ ಮತ್ತು ಗ್ರೂಪ್‌ನ ಅಡ್ಮಿನ್ ವೀರೇಂದರ್ ಸಿಂಗ್ ಎಂಬಾತ ಹೇಳಿದಂತೆ ಅವರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮತ್ತು ನೆಫ್ಟ್ ಮೂಲಕ ಹಂತಹಂತವಾಗಿ 1.14 ಕೋಟಿ ರೂಪಾಯಿ ವರ್ಗಾಯಿಸಿದ್ದರು. ಬಳಿಕ ವಂಚಕರು ತಮ್ಮ ವರಸೆ ಪ್ರಾರಂಭಿಸಿದ್ದು, ಹೆಚ್ಚಿನ ತೆರಿಗೆ ಪಾವತಿಸಬೇಕು, ಇನ್ನಷ್ಟು ಹೂಡಿಕೆ ಮಾಡದಿದ್ದರೆ ಹಣ ವಾಪಸು ಪಡೆಯಲು ಆಗುವುದಿಲ್ಲ ಎಂದೆಲ್ಲ ಹೇಳಿದ್ದರು. ಮೋಸ ಹೋದದ್ದು ಅರಿವಾದ ಬಳಿಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
























