ಪುತ್ತೂರು: ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಓಣಂ ಹಬ್ಬವನ್ನು ಶುಕ್ರವಾರ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಬಿ.ಎಂ. ಮಾಧವ ಕಾರ್ಯಕ್ರಮ ಉದ್ಘಾಟಿಸಿ, ಓಣಂ ಕೇರಳದ ಸಾಂಸ್ಕೃತಿಕ ಮತ್ತು ಸುಗ್ಗಿ ಹಬ್ಬ. ಮಾತ್ರವಲ್ಲ ಪ್ರಕೃತಿ ಜೊತೆಗಿನ ಅವಿನಾಭಾವ ಸಂಬಂಧವನ್ನು ಬೆಸೆಯುವ ಹಬ್ಬವಾಗಿದೆ. ಪ್ರಕೃತಿಯು ರಮಣೀಯತೆ ಹಾಗೂ ಸಮೃದ್ಧ ಫಸಲಿನಿಂದ ಕಂಗೊಳಿಸುವ ಈ ಸಂದರ್ಭದಲ್ಲಿ ಜನರು ಐಕ್ಯತೆ, ಶಾಂತಿ ನೆಮ್ಮದಿಯ, ಸಮೃದ್ಧಿಯ ಪ್ರತೀಕವಾಗಿ ಹಬ್ಬವನ್ನು ನಾಡಿನೆಲ್ಲೆಡೆ ವಿಜ್ರಂಭಣೆಯಿಂದ ಆಚರಿಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ತಿಯಾ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್ ಜೆ. ಪಿ., , ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಬಂಧಕ ಸೋಫಿಕೃಷ್ಣನ್ ಪಾಲ್ಗೊಂಡು ಶುಭ ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ನಿರ್ದೇಶಕಿ ಕಲಾವತಿ ಜಯಂತ್, ಸದಸ್ಯ ಪಿ. ವಿ.ನಾರಾಯಣನ್, ಪ್ರಿನ್ಸಿಪಾಲ್ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಆರ್., ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಂಗಾರತ್ನ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ರಶ್ಮಿತ ಸ್ವಾಗತಿಸಿ, ರಶ್ಮಿ ಕೆ. ವಂದಿಸಿದರು. ಉಪನ್ಯಾಸಕ ರಾಕೇಶ್ ಕುಳದಪಾರೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಕಾಲೇಜಿನಿಂದ ಸಂಪ್ಯದ ವರೆಗೆ ಆಯೋಜಿಸಿದ್ದ ಸಿಂಗಾರಿ ಮೇಳದೊಂದಿಗಿನ ಮೆರವಣಿಗೆಯಲ್ಲಿ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡರು. ಸಾಂಸ್ಕೃತಿಕ, ಕ್ರೀಡಾಕೂಟದೊಂದಿಗೆ ಆಚರಿಸಿ, ಸಾಂಪ್ರದಾಯಿಕ ವಿಶೇಷ ಭಕ್ಷ್ಯ ಗಳೊಂದಿಗೆ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಆಹಾರವನ್ನು ಸವಿದರು.
























