ಪುತ್ತೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಷ್ಯರಾಗಿದ್ದರು, ಅವರ ಸಿದ್ದಾಂತಕ್ಕೆ ಮಾರು ಹೋಗಿದ್ದ ಮಾಜಿ ಪ್ರಧಾನಿಗಳು , ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ದೇಶದಲ್ಲಿ ಜಾರಿಗೆ ತಂದಿದ್ದರು, ಉಳುವವನೇ ಭೂಮಿಯ ಒಡೆಯ ಎಂಬ ಬೂ ಮಸೂದೆ ಕಾನೂನನ್ನು ಜಾರಿ ಮಾಡಲು ನಾರಾಯಣ ಗುರುಗಳೇ ಕಾರಣರಾಗಿದ್ದರು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಭಾನುವಾರ ಶ್ರೀನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ನಾರಾಯಣ ಗುರು ಸ್ವಾಮಿ ಮಂದಿರದ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆದ 171 ನೇ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಅಸಮಾನತೆ, ಜಾತಿ ಪದ್ದತಿ ವಿಜ್ರಂಬಿಸುತ್ತಿದ್ದ ಕಾಲದಲ್ಲಿ ಸಮಾನತೆಯ ಸಿದ್ದಾಂತವನ್ನು ಜಗತ್ತಿಗೆ ಸಾರಿದವರು ನಾರಾಯಣ ಗುರುಗಳು. ಇವರ ತತ್ವ ಸಿದ್ದಾಂತವನ್ನು ಜಗತ್ತೇ ಒಪ್ಪಿಕೊಂಡಿತ್ತು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಕಲ್ಪನೆಯೊಂದಿಗೆ ಸಮಾಜದಲ್ಲಿ ನೊಂದವರ ಧ್ವನಿಯಾಗಿ, ಓರ್ವ ಯೋಗಿಯಾಗಿ ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ನಾರಾಯಣ ಗುರುಗಳ ತತ್ವ ಸಿದ್ದಾಂತಕ್ಕೆ ಮಾರುಹೋಗಿದ್ದರು, ಇದೇ ಕಾರಣಕ್ಕೆ ದೇಶದ ಜನತೆಗೆ ಭೂಮಿಯ ಸಮಾನ ಹಕ್ಕಿಗಾಗಿ ಉಳುವವನೇ ಒಡೆಯ ಎಂಬ ಕಾನೂನು ಜಾರಿಗೆ ತಂದು ಸಮಾನತೆಯನ್ನು ಸಾರಿದರು, ಆದರೆ ಈ ಕಾನೂನು ಜರಿಗೆ ತಂದ ಇಂದಿರಾಗಾಂಧಿಯವರನ್ನು ಜನ ಮರೆತಿದ್ದಾರೆ ಎಂದು ಹೇಳಿದರು.
ಸಮಾಜದ ಕಟ್ಟಕಡೇಯ ವ್ಯಕ್ತಿ ಕೂಡ ಶಿಕ್ಷಣವಂತನಾಗಬೇಕು, ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ಆಂದೋಲನ ಮಾದರಿಯಲ್ಲಿ ಹೋರಾಟ ಮಾಡಿದ ಮಹಾನ್ ವ್ಯಕ್ತಿಯೂ ಆಗಿದ್ದರು. ಅವರನ್ನು ನೆನೆಸುವುದು ಪ್ರತೀಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕರು ಹೇಳಿದರು.
ಬಿಲ್ಲವ ಸಂಘಕ್ಕೂ ಭೂಮಿ
ಸರಕಾರಿ ಜಾಗವನ್ನು ಹುಡುಕಿ ಅದರ ದಾಖಲೆಯನ್ನು ತಂದುಕೊಟ್ಟಲ್ಲಿ ಬಿಲ್ಲವ ಸಂಘಕ್ಕೆ ಭೂಮಿ ಮಂಜೂರು ಮಾಡಿಕೊಡುತ್ತೇನೆ. ಜಾಗ ಎಲ್ಲಿದೆ ಎಂಬುದನ್ನು ಸಂಘದವರೇ ಪತ್ತೆ ಮಾಡಿ ಅದರ ಎಲ್ಲಾ ದಾಖಲೆಗಳನ್ನು ನನ್ನಲ್ಲಿ ನೀಡಿದ್ದಲ್ಲಿ ನಾನು ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಭೂಮಿ ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಈಗಾಗಲೇ ಹಲವು ಸಂಘಗಳಿಗೆ ಭೂಮಿಯನ್ನು ಕೊಡಲಾಗಿದೆ ಎಂದು ಶಾಸಕರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಬೆಂಗಳೂರು ಬಿಲ್ಲವ ಎಸೋಸಿಯೇಶನ್ ಅಧ್ಯಕ್ಷ ಗೋಪಾಲಕೃಷ್ಣ ನೆಕ್ಕಿತಪುಣಿ, ಎಂಜಿನಿಯರ್ ತಾರನಾಥ ಸಾಲಿಯಾನ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ನಂದಾದೀಪ ಫೌಂಡೇಶನ್ ಮತ್ತು ಬಿಲ್ಲವ ಬ್ರಿಗ್ರೇಡ್ ಮಂಗಳೂರು ಕೇಂದ್ರೀಯ ಮಂಡಳಿ ಸಂಸ್ಥಾಪಕ ಸದಾನಂದ ಪೂಜಾರಿ ಹಾಗೂ ಪುತ್ತೂರು ಬಿಲ್ಲವ ಸಂಘದ ವಿದ್ಯಾನಿಧಿ ಸ್ಥಾಪಕ ಸಂಚಾಲಕ ಚಿದಾನಂದ ನಾಡಾಜೆ ಅವರನ್ನು ಸನ್ಮಾನಿಸಲಾಯಿತು.
ನಾರಾಯಣಗುರು ಜಯಂತಿ ಸಭಾ ಕಾರ್ಯಕ್ರಮದ ಮೊದಲು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅವರಿಗೆ ಗುರುಪೂಜೆ ನಡೆಯಿತು. ಈ ಸಂದರ್ಭದಲ್ಲಿ ಗಣಹೋಮ, ಭಜನೆ ನಡೆಯಿತು. ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
























