ಪೂರ್ಣ ಖಗ್ರಾಸ ಚಂದ್ರ ಗ್ರಹಣವನ್ನು ಕಣ್ತಂಬಿಕೊಂಡ ಜನ
ಬೆಂಗಳೂರು : ಭಾನುವಾರ ರಾತ್ರಿ ನಭೋಮಂಡಲದಲ್ಲಿ ನಡೆದ ರಕ್ತ ಚಂದಿರನ ಚಮತ್ಕಾರವನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಕೊಂಡು ಖುಷಿಪಟ್ಟರು. ಚಂದ್ರ ಭಾನುವಾರ ಅಕ್ಷರಶಃ ಬೆಂಕಿಚೆಂಡಿನಂತೆ ಗೋಚರಿಸಿತು. ಅತ್ಯಂತ ಅಪರೂಪದ, ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ರಾಹುಗ್ರಸ್ಥ ಚಂದ್ರ ಗ್ರಹಣ ಗೋಚರಿಸಿತು. ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಇಡೀ ವಿಶ್ವ ಸಾಕ್ಷಿಯಾಯಿತು. ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ಬಂದಿದ್ದ ಈ ನೆರಳು ಬೆಳಕಿನಾಟ ಜನರನ್ನು ನಿಬ್ಬೆರಗುಗೊಳಿಸಿತು.
ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶ ಆರಂಭವಾಗಿ ಮಧ್ಯರಾತ್ರಿ 1.26ಕ್ಕೆ ಚಂದ್ರನಿಗೆ ಗ್ರಹಣ ಮೋಕ್ಷವಾಯಿತು. ಆರಂಭದಿಂದ ಹಂತಹಂತವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತಾ ಭೂಮಿಯ ನೆರಳು ಸಾಗಿತ್ತು. ಸರಿಯಾಗಿ 11 ಗಂಟೆ 21 ನಿಮಿಷಕ್ಕೆ ಚಂದ್ರನನ್ನು ಅರ್ಧಭಾಗ ಆವರಿಸಿಕೊಂಡಿತು. ಆ ಬಳಿಕ ಸರಿಯಾಗಿ 11 ಗಂಟೆ 42 ನಿಮಿಷಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ರಾತ್ರಿ 11.42ರ ವೇಳೆಗೆ ಸಂಪೂರ್ಣ ಗಾಢಕೆಂಪು ಬಣ್ಣಕ್ಕೆ ಚಂದಿರ ತಿರುಗಿದನು. ಈ ಮೂಲಕ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿತು.
ಕೆಲವು ರಾಜ್ಯಗಳಲ್ಲಿ ಮೋಡಗಳ ಕಣ್ಣಾಮುಚ್ಚಾಲೆ ಬಿಟ್ಟರೆ, ಭಾರತದಾದ್ಯಂತ ಬಹುತೇಕ ಕಡೆಗಳಲ್ಲಿ ರಕ್ತಚಂದಿರನ ದರ್ಶನವಾಯಿತು. ದೆಹಲಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಹೀಗೆ ಎಲ್ಲೆಡೆ ಬ್ಲಡ್‌ಮೂನ್ ದರ್ಶನವಾಯಿತು. ಕೋಲ್ಕತ್ತಾದಲ್ಲಿ ಶುಭಾಸ್ ಚಂದ್ರಬೋಸ್ ಪ್ರತಿಮೆ ಬಳಿ ಸೆರೆಹಿಡಿದ ಚಂದಿರನ ಚಿತ್ರ ಚಿತ್ತಾಕರ್ಷಕವಾಗಿತ್ತು.
ಖಗ್ರಾಸ ಚಂದ್ರ ಗ್ರಹಣದ ಕಾರಣ ದೇಗುಲಗಳು ಬಂದ್ ಆಗಿದ್ದವು. ದೇವಾಲಯಗಳಲ್ಲಿ ಗ್ರಹಣ ಮೋಕ್ಷದ ಬಳಿಕ ವಿಶೇಷ ಪೂಜೆ ನೆರವೇರಿಸಲಾಯಿತು. ಹೋಮ, ಹವನ, ಜಲಾಭಿಷೇಕ ಅರ್ಪಿಸಲಾಯಿತು. ಕೆಲವು ದೇವಸ್ಥಾನಗಳಲ್ಲಿ ಚಂದ್ರ ಗ್ರಹಣ ಆರಂಭವಾದ ಬಳಿಕ ಶುರುವಾದ ಪೂಜಾ ಕೈಂಕರ್ಯ, ಗ್ರಹಣ ಮುಕ್ತಾಯಯದವರೆಗೂ ನಡೆಯಿತು.
ರಾತ್ರಿ 9 ಗಂಟೆ 57 ನಿಮಿಷಕ್ಕೆ ಸರಿಯಾಗಿ ಆರಂಭವಾದ ಚಂದ್ರಗ್ರಹಣ ಮೊದಲು ಗೋಚರಿಸಿದ್ದು ಸೈಪ್ರಸ್‌ನಲ್ಲಿ. ಭಾರತದಲ್ಲಿ ಮೊದಲು ಗೋಚರಿಸಿದ್ದು ಲಡಾಖ್‌ನಲ್ಲಿ. ಟರ್ಕಿ, ಸೈಪ್ರಸ್, ಇಂಡೋನೇಷ್ಯಾದ ಜಕಾರ್ತ, ಆಸ್ಟ್ರೇಲಿಯಾ ಸಿಡ್ನಿ, ಚೀನಾದ ಬೀಜಿಂಗ್, ದುಬೈನಲ್ಲಿ ಶ್ವೇತ ವರ್ಣದ ಚಂದಿರ ಕೆಂಬಣ್ಣದಲ್ಲಿ ಗೋಚರಿಸಿತು.
























