ಇಂದು ಚಂದ್ರ ಗ್ರಹಣ : ಬರೋಬ್ಬರಿ 82 ನಿಮಿಷ ಕಡುಕೆಂಪು ಬಣ್ಣದಲ್ಲಿ ಕಂಗೊಳಿಸಲಿರುವ ಚಂದ್ರಮ

ಅಪರೂಪದ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಕುತೂಹಲ

ಮಂಗಳೂರು : ಇಂದು ರಾತ್ರಿ ಪೂರ್ಣ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಈ ಖಗೋಲ ವಿದ್ಯಮಾನವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಖಗೋಲ ಆಸಕ್ತರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇಂದಿನ ಚಂದ್ರ ಗ್ರಹಣದ ವೇಳೆ ಚಂದ್ರ ಬರೋಬ್ಬರಿ 82 ನಿಮಿಷಗಳಷ್ಟು ಹೊತ್ತು ಕಡುಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಚಂದ್ರಗ್ರಹಣವನ್ನು ರಕ್ತಚಂದನ ಗ್ರಹಣ ಎಂದೂ ಕರೆಯುತ್ತಾರೆ. ಇದು ಒಂದು ಅಪರೂಪದ ಖಗೋಲ ವಿದ್ಯಮಾನವಾಗಿದೆ.

ಇಷ್ಟು ದೀರ್ಘ ಹೊತ್ತು ಚಂದ್ರ ಕೆಂಬಣ್ಣದಲ್ಲಿ ಕಾಣುವುದು ಬಹಳ ಅಪರೂಪ. ಇಂದು ಸಂಭವಿಸಲಿರುವುದು ಬಹಳ ದೀರ್ಘವಾದ ಚಂದ್ರ ಗ್ರಹಣಗಳಲ್ಲಿ ಒಂದಾಗಿದೆ. ಹೀಗೆ ನಾನಾ ಕಾರಣಗಳಿಗಾಗಿ ಖಗೋಲ ವಿಜ್ಞಾನಿಗಳ ಪಾಲಿಗೆ ಇಂದಿನ ದಿನ ತುಂಬ ಮಹತ್ವ ಪಡೆದಿದೆ. ಮಂಗಳೂರಿನ ಪಿಲಿಕುಲದಲ್ಲಿ ಖಗ್ರಾಸ ಚಂದ್ರ ಗ್ರಹಣ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಜಗತ್ತಿನ ವಿವಿಧೆಡೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬರಿಗಣ್ಣಿನಿಂದಲೂ ಈ ಗ್ರಹಣವನ್ನು ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.





















































 
 

ಗ್ರಹಣಗಳಿಗೆ ವಿಜ್ಞಾನದಲ್ಲಿರುವಷ್ಟೇ ಮಹತ್ವ ಜ್ಯೋತಿಷ್ಯ ಶಾಸ್ತ್ರದಲ್ಲೂ ಇದೆ. ಶಾಸ್ತ್ರಗಳ ಪ್ರಕಾರ ಗ್ರಹಣದಿಂದ ಕೆಲವು ರಾಶಿಯವರಿಗೆ ಕೆಲವು ದೋಷಗಳು ಉಂಟಾಗುತ್ತವೆ. ಇಂಥವರು ಏನೇನು ಮಾಡಬೇಕೆಂದು ಜ್ಯೋತಿಷಿಗಳು ಈಗಾಗಲೇ ಸಲಹೆ ನೀಡಿದ್ದಾರೆ. ಗ್ರಹಣದ ದಿನ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮತ್ತಿತರ ನಿತ್ಯ ಧಾರ್ಮಿಕ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗುತ್ತದೆ.

ಇಂದಿನ ಗ್ರಹಣದ ಸಲುವಾಗಿ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆಯ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಗ್ರಹಣ ರಾತ್ರಿ ಸಂಭವಿಸುವುದಾದರೂ ಮಧ್ಯಾಹ್ನದಿಂದಲೇ ಕೆಲವು ದೇವಸ್ಥಾನಗಳಲ್ಲಿ ಪೂಜೆಗಳು ಸ್ಥಗಿತಗೊಳ್ಳಲಿವೆ. ಕಟೀಲು ಸೇರಿದಂತೆ ನಿತ್ಯ ಅನ್ನದಾನ ನಡೆಯುವ ದೇವಸ್ಥಾನಗಳಲ್ಲಿ ಇಂದು ರಾತ್ರಿಯ ಅನ್ನದಾನ ಇರುವುದಿಲ್ಲ.

ಇಂದಿನ ಖಗ್ರಾಸ ಚಂದ್ರ ಗ್ರಹಣವನ್ನು ಭಾರದಲ್ಲಿ ಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಇದು ಈ ವರ್ಷದ ಎರಡನೆಯ ಮತ್ತು ಕೊನೆಯ ಚಂದ್ರಗ್ರಹಣ. ಭಾರತ, ಚೀನ, ಮಂಗೋಲಿಯಾ, ರಷ್ಯಾದ ಕೆಲವು ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಶ್ರೀಲಂಕಾ, ಏಷ್ಯಾ ಖಂಡದ ವಿವಿಧ ರಾಷ್ಟ್ರಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್‌ ದೇಶಗಳು, ಆಸ್ಟ್ರೇಲಿಯಾದಲ್ಲೂ ಇಂದಿನ ಚಂದ್ರಗ್ರಹಣವನ್ನು ವೀಕ್ಷಿಸಬಹುದು.

ಖಗ್ರಾಸ ಚಂದ್ರ ಗ್ರಹಣ ಸಮಯ

ಗ್ರಹಣ ಸ್ಪರ್ಶ ಕಾಲ : ರಾತ್ರಿ 9.57
ಗ್ರಹಣದ ಮಧ್ಯ ಕಾಲ: ರಾತ್ರಿ 11.41
ಗ್ರಹಣ ಮೋಕ್ಷ ಕಾಲ: ತಡರಾತ್ರಿ 1.26
ಗ್ರಹಣದ ಸಂಪೂರ್ಣ ಕಾಲಾವಧಿ: 3 ಗಂಟೆ 29 ನಿಮಿಷ

error: Content is protected !!
Scroll to Top