ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದು ಕೊಟ್ಟದ್ದು ವಿಠಲ ಗೌಡ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅಂತಿಮವಾಗಿ ಬುರುಡೆ ತಂದುಕೊಟ್ಟದ್ದು ಸೌಜನ್ಯಾಳ ಮಾವ ವಿಠಲ ಗೌಡ ಎನ್ನುವ ವಿಚಾರ ಬಯಲಾಗಿದ್ದು, ಹೀಗಾಗಿ ನಿನ್ನೆ ರಾತ್ರಿಯೇ ಎಸ್‌ಐಟಿ ತಂಡ ವಿಠಲ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದೆ.
ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ.
ರಾತ್ರಿ ಹೊತ್ತು ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಸ್ಥಳ ಮಹಜರು ಮಾಡಲಾಗಿದೆ. ವಿಶೇಷ ತನಿಖಾ ತಂಡದ ಪೊಲೀಸರು ವಿಠಲ ಗೌಡ ಅವರನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಇರುವ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಸ್ಥಳ ಮಹಜರು ಮಾಡಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಬೆಳ್ತಂಗಡಿ ಠಾಣೆಗೆ ಮರಳಿ ಕರೆತಂದಿದ್ದಾರೆ.
ವಿಠಲ ಗೌಡ ಮತ್ತು ಜಯಂತ್ ಬುರುಡೆಯನ್ನು ಈ ಜಾಗದಿಂದ ತೆಗೆದು ಚಿನ್ನಯ್ಯನಿಗೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸಂಜೆ ಸ್ಥಳ ಮಹಜರು ಮಾಡಿದ್ದಾರೆ ಎನ್ನಲಾಗುತ್ತಿದೆ. ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡ ನಿಕಟ ಸಂಪರ್ಕದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಶುಕ್ರವಾರ ವಿಠಲ್ ಗೌಡ ಎಸ್‌ಐಟಿ ಕಚೇರಿಗೆ ಹಾಜರಾಗಿದ್ದರು.
ಚಿನ್ನಯ್ಯ ಶಿವಮೊಗ್ಗ ಜೈಲಿಗೆ ಶಿಫ್ಟ್
ಬುರುಡೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಚಿನ್ನಯ್ಯನಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನಿನ್ನೆ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.
ಕೋರ್ಟ್ ಆದೇಶದ ಅನ್ವಯ ನಿನ್ನೆಯೇ ಚಿನ್ನಯ್ಯನನ್ನು ಶಿವಮೊಗ್ಗದ ಜೈಲಿಗೆ ಕರೆದೊಯ್ಯಲಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಶಿವಮೊಗ್ಗದ ಜೈಳಿನಲ್ಲಿಡಲು ಕೋರ್ಟ್ ಆದೇಶಿಸಿದೆ.
ದಯಾಮರಣ ಕೋರಿದ ಉದಯ್ ಕುಮಾರ್ ಜೈನ್
ಈ ನಡುವೆ ಸೌಜನ್ಯಾ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಖುಲಾಸೆಗೊಂಡಿದ್ದ ಉದಯ್ ಕುಮಾರ್ ಜೈನ್ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಬೆಳವಣಿಗೆ ನಡಡೆದಿದೆ. ನಿನ್ನೆಯಿಂದೀಚೆಗೆ ಉದಯ್ ಕುಮಾರ್ ಜೈನ್ ವಿಡಿಯೋ ಬಹಳ ವೈರಲ್ ಆಗುತ್ತಿದೆ. ಇದರೊಂದಿಗೆ ಗಿರೀಶ್ ಮಟ್ಟಣ್ಣವರ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ಕೂಡ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.

ಸೌಜನ್ಯ ಪ್ರಕರಣದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. 13 ವರ್ಷಗಳಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದು ಸಮಾಜದಲ್ಲಿ ನನ್ನನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಜೈನ್ ಉಲ್ಲೇಖಿಸಿದ್ದಾರೆ.
ಸಂತೋಷ್ ರಾವ್ ಆರೋಪಿ ಎಂದು ಬೆಳ್ತಂಗಡಿ ಪೊಲೀಸರು ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸಿಐಡಿ, ಸಿಬಿಐ ತನಿಖೆಯಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ನಾನು ನಿರ್ದೋಷಿ ಎಂದು ಸಾಬೀತುಪಡಿಸಲು ಮಂಪರು ಪರೀಕ್ಷೆ ಕೂಡ ಮಾಡಿಸಿದ್ದೇನೆ. ಹೀಗಾಗಿ ನನಗೆ ನ್ಯಾಯ ಕೊಡಬೇಕು ಅಥವಾ ದಯಾಮರಣ ನೀಡಬೇಕೆಂದು ಉದಯ್ ಜೈನ್ ಮನವಿ ಮಾಡಿಕೊಂಡಿದ್ದಾರೆ.
ಸಿಐಡಿ, ಸಿಬಿಐ ತನಿಖೆಯಲ್ಲಿ ಕಳಂಕಮುಕ್ತರಾಗಿದ್ದ ಉದಯ್ ಕುಮಾರ್ ಜೈನ್ ಅವರಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ನೋಟಿಸ್ ಹಿನ್ನೆಲೆಯಲ್ಲಿ ಉದಯ್ ಜೈನ್ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದರು.
























