ಬೆಂಗಳೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಅನುದಾನ ಹಂಚಿಕೆಗೆ ಸಂಬಂಧಿಸಿದ ಹಾಗೆ ಸಿ ಎಂ ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ R. ಅಶೋಕ್ ಅವರು ಟೀಕೆ ಮಾಡಿದ್ದಾರೆ.
ಸಚಿವ ಚೆಲುವರಾಯಸ್ವಾಮಿ ಅವರಿಗೆ ಅನುದಾನಕ್ಕೆ ಸಂಬಂಧಿಸಿದ ಹಾಗೆ ಸಿದ್ದರಾಮಯ್ಯ ಮನವಿ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷಿ ಸಚಿವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡ ಕಾಲೋನಿಗಳ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿಗಾಗಿ ಸಿಎಂ ಬಳಿ ಮನವಿ ಮಾಡಬೇಕಾಗಿದೆ ಅಂದರೆ, ರಾಜ್ಯ ಸರ್ಕಾರ ಎಷ್ಟು ದುರ್ಬಲವಾಗಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ‘ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕಾಗಿದೆ’. ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ‘ರಸ್ತೆ ಬೇಕಾದರೆ ಗ್ಯಾರೆಂಟಿ ಯೋಜನೆ ಸ್ಥಗಿತಗೊಳಿಸಬೇಕು’ ಎಂದಿದ್ದಾರೆ. ಗವಿಯಪ್ಪ ಶಾಸಕರು ಇನ್ನೂ ಮುಂದೆ ಹೋಗಿ “ಇದೇ ಸ್ಥಿತಿ ಮುಂದುವರಿದರೆ ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಬಿ.ಆರ್. ಪಾಟೀಲ, ರಾಜು ಕಾಗೆ ಸೇರಿದಂತೆ ಅನೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅನುದಾನ ಕೊರತೆಯಿಂದ ಕಾರ್ಯ ನಿರ್ವಹಣೆಗೆ ತೊಂದರೆ ಎದುರಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಅಸಮಾಧಾನಗಳ ನಡುವೆ ಆರ್. ಅಶೋಕ್ ಅವರು “ಇನ್ನೆಷ್ಟು ದಿನ ಈ ಭಂಡ ಬಾಳು? ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ರಾಜ್ಯವನ್ನು ಉಳಿಸಲಿ” ಎಂದು ತಿಳಿಸಿದ್ದಾರೆ.
























