ಪುತ್ತೂರು: ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ಎಂಬಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದು ಸಂಪೂರ್ಣ ಕಳಪೆಯಾಗಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆರೋಪಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ರಸ್ತೆಯಲ್ಲಿ ಸುಮಾರು 40 ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, 50% ಸಹ ಸಂಪೂರ್ಣವಾಗಿ ಕಾಮಗಾರಿ ನಡೆಯದೇ ಇದ್ದು, ವಾಹನ ಸಂಚಾರ ಆರಂಭವಾದ ಎರಡನೇ ದಿನದಲ್ಲಿ ಇಂಟರ್ಲಾಕ್ ಕಿತ್ತುಕೊಂಡು ಬರುತ್ತಿದೆ. ಇದರಿಂದ ವಾಹನ ಸವಾರರು ಪೇಚಾಡುವ ಪರಿಸ್ಥಿತಿ ಉಂಟಾಗಿದೆ. ಇದು ಕಳಪೆ ಕಾಮಗಾರಿ ಎನ್ನುವುದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.
ಕಾಮಗಾರಿ ನಡೆಸಿದ ಇಲಾಖಾಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಈ ರಸ್ತೆಗೂ ನಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಸರ್ವಾಜನಿಕರನ್ನ ಕೆರಳಿಸಿದೆ. ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆಗಳು ಕೂಡ ಸಂಭವಿಸಿದೆ. ಸಾರ್ವಜನಿಕರು ಮತ್ತು ವಾಹನ ಸವಾರರ ಅಪೇಕ್ಷೆಯಂತೆ ಕಿತ್ತು ಹೋಗಿರುವ ಇಂಟರ್ಲಾಕ್ ಗಳನ್ನ ತೆಗೆದು ಈ ರಸ್ತೆಗೆ ಡಾಮರು ಅಥವಾ ಕಾಂಕ್ರಿಟೀಕರಣವನ್ನು ಮಾಡಬೇಕು.
ತಕ್ಷಣ ಇಲಾಖೆ ಅಧಿಕಾರಿಗಳು ಕ್ರಮವನ್ನ ಕೈಗೊಳ್ಳಬೇಕು. ಈ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ವಾಹನ ಚಾಲಕ ಮಾಲಕರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ರಸ್ತೆ ತಡೆಯ ಮುಖಾಂತರ ಪ್ರತಿಭಟನೆ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
























