ನಾಳೆ ಖಗ್ರಾಸ ಚಂದ್ರ ಗ್ರಹಣ : 5.27 ಗಂಟೆ ನಭದಲ್ಲಿ ಬೆಳಕು-ನೆರಳಿನ ಕೌತುಕದಾಟ

ಸುಬ್ರಹ್ಮಣ್ಯ, ತಿರುಪತಿ ಸೇರಿ ದೇವಳಗಳಲ್ಲಿ ಪೂಜಾ ಸಮಯ ಬದಲಾವಣೆ

ಬೆಂಗಳೂರು: ಭಾನುವಾರ ರಾತ್ರಿ ನಭದಲ್ಲಿ ಕೌತುಕದ ರಕ್ತಚಂದನ ಚಂದ್ರಗ್ರಹಣ ಸಂಭವಿಸಲಿದೆ. ಸುದೀರ್ಘ 5 ಗಂಟೆ 27 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.

ನಾಳೆ ರಾತ್ರಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ ಚಂದ್ರ ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ ಖಗ್ರಾಸ ಚಂದ್ರಗ್ರಹಣ ಎಂದು ಇದನ್ನು ಕರೆಯುತ್ತಾರೆ. ಭೂಮಿಯು ಚಂದ್ರನ ಮೇಲೆ ನೇರವಾಗಿ ಬೀಳುವ ಸೂರ್ಯ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ ಭೂಮಿಯ ವಾತಾವರಣದಲ್ಲಿದುರುವ ಕೆಂಪು ಬಣ್ಣ ಚಂದ್ರನ ಮೈಮೇಲಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗಾಗಿ ಹುಣ್ಣಿಮೆಯ ಚಂದ್ರ ರಕ್ತಚಂದನದ ರೀತಿ ಗೋಚರಿಸಲಿದ್ದಾನೆ.





















































 
 

ಯಾವಾಗ ಪ್ರಾರಂಭ?

ಭಾನುವಾರ ರಾತ್ರಿ 8.50ಕ್ಕೆ ಗ್ರಹಣ ಪ್ರಾರಂಭವಾಗುವಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭವಾಗುತ್ತದೆ. ಆದರೆ ಇದು ಚಂದ್ರನ ಮೇಲೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. 9.57ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹರಿದಾಡುತ್ತದೆ. 11 ಗಂಟೆಗೆ ಚಂದ್ರ ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಬಂದಿರುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12.22ರವರೆಗೆ (ಸುಮಾರು 1 ಗಂಟೆ 22 ನಿಮಿಷ) ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಬಹುದು. 11.41ಕ್ಕೆ ಗರಿಷ್ಠ ಗ್ರಹಣದ ಕಾಲದಲ್ಲಿ ಕೆಂಪು ಚಂದ್ರನನ್ನು ವೀಕ್ಷಿಸಬಹುದು. 1.26ಕ್ಕೆ ಚಂದ್ರನು ಭೂಮಿಯ ನೆರಳಿನಿಂದ, ನಂತರ 2.25ಕ್ಕೆ ಭೂಮಿಯ ಅರೆನೆರಳಿನಿಂದ ಹೊರಬರುತ್ತಾನೆ. ಈ ಗ್ರಹಣದ ವಿವಿಧ ಹಂತಗಳು ಒಟ್ಟಾರೆ ಸುಮಾರು 5 ಗಂಟೆ 27 ನಿಮಿಷ ನಡೆಯಲಿದೆ.

ಎಲ್ಲೆಲ್ಲಿ ಕಾಣಲಿದೆ?

ಈ ಗ್ರಹಣ ಭಾರತ, ಶ್ರೀಲಂಕಾ ಚೀನಾ, ಮಂಗೋಲಿಯಾ, ರಷ್ಯಾದ ಕೇಂದ್ರ ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್‌ ದೇಶಗಳು ಮತ್ತು ಆಸ್ಪ್ರೇಲಿಯಾದಲ್ಲಿ ಗೋಚರಿಸಲಿದೆ. ಭಾರತದ ಎಲ್ಲ ಭಾಗಗಳಿಂದ ಎಲ್ಲರೂ ಈ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಿಂದ ಯಾವುದೇ ಹಾನಿಯಿಲ್ಲದೆ ವೀಕ್ಷಿಸಬಹುದು ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.

ದೇವಳಗಳಲ್ಲಿ ಪೂಜೆ ಸಮಯ ಬದಲಾವಣೆ

ಸೆ.7ರಂದು ಚಂದ್ರಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೂ ಸೇರಿದಂತೆ ನಾಡಿನ ಪ್ರಮುಖ ದೇವಳಗಳಲ್ಲಿ ಪೂಜಾ ಸಮಯ, ದೇವರ ದರ್ಶನದ ಸಮಯ ಬದಲಾಗಲಿದೆ. ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನದ ಮಹಾಪೂಜೆ 11 ಗಂಟೆಗೆ ಹಾಗೂ ರಾತ್ರಿಯ ಮಹಾಪೂಜೆ ಸಂಜೆ 5 ಗಂಟೆಗೆ ನೆರವೇರಲಿದೆ. ರಾತ್ರಿ ಭೋಜನ ಪ್ರಸಾದ ಹಾಗೂ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ. ಸಂಜೆ 5ರಿಂದ ದೇವರ ದರುಶನ ಇರುವುದಿಲ್ಲ. ಸೆ.8ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.

ತಿರುಪತಿ ದೇಗುಲವನ್ನು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ. ಅನ್ನಪ್ರಸಾದವೂ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

error: Content is protected !!
Scroll to Top