ಮಂಗಳೂರು: ಕಾಣೆಯಾಗಿದ್ದ ಕಾರ್ಮಿಕನ ಮೃತದೇಹ ಎರಡು ತಿಂಗಳ ಬಳಿಕ ನೀರಿನ ಟಾಂಕಿಯಲ್ಲಿ ಪತ್ತೆ

ಸುರತ್ಕಲ್ : ಮುಕ್ಕದಲ್ಲಿರುವ ಎಸ್ಟೇಟ್‌ ಒಂದರಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ನೀರಿನ‌ ಟ್ಯಾಂಕ್‌ನಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪರಂಪುರದ ರತುವಾ ನಿವಾಸಿ ಮುಖೇಶ್ ಮಂಡಲ್ (27) ಎಂಬಾತನನ್ನು ಕೊಲೆಗೈದ ಆರೋಪದಲ್ಲಿ ಪಶ್ಚಿಮ‌ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.‌

ಮುಕ್ಕದಲ್ಲಿರುವ ರೋಹನ್ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮುಖೇಶ್ ಮಂಡಲ್ ಜೂನ್ 24ರಂದು ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗಿದ್ದ ಮುಖೇಶ್ ಮಂಡಲ್‌ನ ಮೃತದೇಹ ಆಗಸ್ಟ್ 21ರಂದು ಎಸ್ಟೇಟ್‌ನ ನೀರಿನ ಟ್ಯಾಂಕ್‌ನಲ್ಲಿ ಸಂಪೂರ್ಣ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಪಶ್ಚಿಮ‌ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ವಶಕ್ಕೆ ಪಡೆದು ಸುರತ್ಕಲ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಮುಖೇಶ್ ಮಂಡಲ್‌ನನ್ನು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ನೀರಿನ ಟ್ಯಾಂಕ್‌ಗೆ ಹಾಕಿ ಮರದ ಮುಚ್ಚಳ ಮುಚ್ಚಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





















































 
 

ಜೂನ್ 24ರ ರಾತ್ರಿ ಆರೋಪಿ ಮತ್ತು ಮುಖೇಶ್ ರೋಹನ್ ಎಸ್ಟೇಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ಮದ್ಯಪಾನ ಮಾಡುತ್ತಿದ್ದೆವು. ಮುಖೇಶ್ ತನ್ನ ಮೊಬೈಲ್ ಫೋನ್‌ನಲ್ಲಿ ಲಕ್ಷ್ಮಣನ ಪತ್ನಿಯ ಅಶ್ಲೀಲ ವೀಡಿಯೊಗಳನ್ನು ತೋರಿಸಿದ್ದು, ಅವುಗಳನ್ನು ಆತ ರಹಸ್ಯವಾಗಿ ರೆಕಾರ್ಡ್ ಮಾಡಿದ್ದನು. ಇದರಿಂದ ಕೆರಳಿದ ಲಕ್ಷ್ಮಣ್ ಹತ್ತಿರದಲ್ಲಿದ್ದ ಕಬ್ಬಿಣದ ರಾಡ್‌ನಿಂದ ಮುಖೇಶ್‌ನ ತಲೆಗೆ ಹೊಡೆದು ಹತ್ಯೆ ಮಾಡಿ ಮೃತದೇಹವನ್ನು ಎಸ್ಟೇಟ್‌ನ ಎಸ್‌ಟಿಪಿ ಟ್ಯಾಂಕ್‌ಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top