ಜಿಎಸ್‌ಟಿ ದರದಲ್ಲಿ ಭಾರಿ ಬದಲಾವಣೆ; ಕೇಂದ್ರದಿಂದ ಜನರಿಗೆ ದೀಪಾವಳಿಗೂ ಮೊದಲೇ ಭರ್ಜರಿ ಉಡುಗೊರೆ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಕುರಿತು ನೀಡಿದ ವಾಗ್ದಾನವನ್ನು ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್ ಇರಲಿದ್ದು ಸೆ.22ರಿಂದ ನೂತನ ದರಗಳು ಅನ್ವಯವಾಗಲಿದೆ. ಇದರಿಂದ ಹಲವು ವಸ್ತುಗಳ ಬೆಲೆ ಇಳಿದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ.
ಮೋದಿ ದೀಪಾವಳಿ ಹಬ್ಬದ ಉಡುಗೊರೆಯಾಗಿ ಬೆಲೆ ಇಳಿಕೆ ಮಾಡುವುದಾಗಿ ಹೇಳಿದ್ದರು. ಆದರೆ ದೀಪಾವಳಿಗಿಂತ ಮೊದಲೇ ದಸರಾ ಹಬ್ಬದ ಸಂದರ್ಭದಲ್ಲೆ ಬೆಲೆ ಇಳಿಕೆ ನಿರ್ಧಾರ ಜಾರಿಗೆ ಬರಲಿದೆ.
56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾಗಿದೆ ಎಂದಿದ್ದಾರೆ.
ಈ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೆ ಅಂದಾಜು 93,000 ಕೋಟಿ ರೂ. ಆದಾಯ ಕಡಿಮೆಯಾಗಲಿದೆ. ದಸರಾ ಹಬ್ಬಕ್ಕೂ ಸ್ವಲ್ಪ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ರಾಜ್ಯ ಹಣಕಾಸು ಸಚಿವರು ತಿಳಿಸಿದ್ದಾರೆ. ಮುಖ್ಯವಾಗಿ, ಯಾವುದೇ ಹೊಸ ಲೆವಿಗಳು ಅಥವಾ ಹೆಚ್ಚುವರಿ ಸೆಸ್‌ಗಳು ಇರುವುದಿಲ್ಲ ಎಂದು ಕೌನ್ಸಿಲ್ ಒಪ್ಪಿಕೊಂಡಿದೆ. ಇದು 2017ರಲ್ಲಿ GST ಜಾರಿಗೆ ಬಂದ ನಂತರದ ಅತ್ಯಂತ ಮಹತ್ವದ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಯಾವ ವಸ್ತುಗಳಿಗೆ ಜಿಎಸ್‌ಟಿ ಕಡಿಮೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ:
ಶೇ.12 ಮತ್ತು ಶೇ.18ರಿಂದ ಶೇ.5ಕ್ಕೆ ಇಳಿದಿರುವ ವಸ್ತುಗಳು:
- ಕೇಶ ತೈಲ (ಹೇರ್ ಆಯಿಲ್)
- ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು
- ಶಾಂಪೂ
- ಶೇವಿಂಗ್ ಕ್ರೀಮ್
- ಟೂತ್‌ಬ್ರಶ್, ಟೂತ್‌ಪೇಸ್ಟ್
- ಸೈಕಲ್
- ಟೇಬಲ್ ವೇರ್, ಕಿಚನ್ ವೇರ್ ಮತ್ತು ಇತರ ಅಡುಗೆಮನೆಯ ಉಪಕರಣಗಳು
- ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು, ನಮ್‌ಕೀನ್‌ಗಳು, ಪಾತ್ರೆಗಳು
*ಫೀಡಿಂಗ್ ಬಾಟಲಿಗಳು, ಶಿಶುಗಳ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು - ಹೊಲಿಗೆ ಯಂತ್ರಗಳು
ಶೂನ್ಯಕ್ಕೆ ಇಳಿದಿರುವ ವಸ್ತುಗಳು (0%)
- ಅಲ್ಟ್ರಾ-ಹೈ ಟೆಂಪರೇಚರ್ ಹಾಲು
- ಪನೀರ್
- ರೊಟ್ಟಿ, ಪರೋಟಾ
- 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳಿಗೆ ಔಷಧಗಳು
- ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
ಶೇ.28ರಿಂದ ಶೇ.18ಕ್ಕೆ ಇಳಿದಿರುವ ವಸ್ತುಗಳು:
- ಹವಾನಿಯಂತ್ರಣ ಯಂತ್ರಗಳು (ಎಸಿ)
- 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲ ಟಿವಿಗಳು ಈಗ ಶೇ.18 ಜಿಎಸ್‌ಟಿ ವ್ಯಾಪ್ತಿಗೆ)
- ಡಿಶ್‌ವಾಷಿಂಗ್ ಯಂತ್ರಗಳು
- ಸಣ್ಣ ಕಾರುಗಳು
- 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳು
- ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
- ಎಲ್ಲ ಆಟೋ ಭಾಗಗಳು
- ತ್ರಿಚಕ್ರ ವಾಹನಗಳು
- ಸಿಮೆಂಟ್
ದುಬಾರಿಯಾದ ವಸ್ತುಗಳು
- ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು: ಸಿಗರೇಟ್, ಸಿಗಾರ್, ಗುಟ್ಕಾ, ಪಾನ್ ಮಸಾಲ, ತಂಬಾಕು ಆಧಾರಿತ ಜಗಿಯುವ ವಸ್ತುಗಳು ಈ ವಸ್ತುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮದಿಂದಾಗಿ 96% ವರೆಗೆ ವಿವಿಧ ಸೆಸ್.
- ಸಕ್ಕರೆ-ಸಿಹಿ ಪಾನೀಯಗಳು: ಕಾರ್ಬೊನೇಟೆಡ್ ಪಾನೀಯಗಳು, ಎನರ್ಜಿ ಡ್ರಿಂಕ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳು. ಈ ಹಿಂದೆ 28% ತೆರಿಗೆ ವಿಧಿಸಲಾಗಿದ್ದ ಪಾನೀಯಗಳು ಈಗ ಆಯ್ದ ವಸ್ತುಗಳ ಮೇಲೆ 40% ಸ್ಲ್ಯಾಬ್ ಜೊತೆಗೆ 12% ಸೆಸ್ ಅನ್ನು ವಿಧಿಸಲಾಗಿದೆ.
- ಜೂಜು ಮತ್ತು ಬೆಟ್ಟಿಂಗ್: ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಇಲ್ಲದೆ 40% ತೆರಿಗೆ.
- ಐಷಾರಾಮಿ ವಾಹನಗಳು: 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳಂತಹ ಉನ್ನತ ದರ್ಜೆಯ ಕಾರುಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು 40% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ, ಜೊತೆಗೆ 22% ಪರಿಹಾರ ಸೆಸ್ ಕೂಡ ಸೇರುತ್ತದೆ.
- ಸಂಸ್ಕರಿಸಿದ ಜಂಕ್ ಫುಡ್‌ಗಳು: ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳಂತಹ ವಸ್ತುಗಳು ಸಹ 40% ಏರಿಕೆ
ಮೋದಿ ಟ್ವೀಟ್
ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿಎಸ್‌ಟಿಯಲ್ಲಿ ಮುಂದಿನ ಹಂತದ ಸುಧಾರಣೆಗಳನ್ನು ತರುವ ನಮ್ಮ ಬಯಕೆಯ ಬಗ್ಗೆ ನಾನು ಮಾತನಾಡಿದ್ದೆ. ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಿಎಸ್‌ಟಿ ದರಗಳ ಸಮಗ್ರ ಮತ್ತು ತರ್ಕಬದ್ಧ ಸುಧಾರಣೆಗೆ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿ, ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಮಗ್ರ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಹೇಳಿದ್ದಾರೆ.
ರಾಜ್ಯಕ್ಕೆ 70 ಸಾವಿರ ಕೋ.ರೂ. ಕೊರತೆ
ಕೇಂದ್ರ ಸರ್ಕಾರದ ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಹೊರೆಯಾಗುವ ಬಗ್ಗೆ ಆತಂಕ ಎದುರಾಗಿದೆ. ಈ ಬಗ್ಗೆ ಅಂದಾಜು ಮಾಡಿರುವ ರಾಜ್ಯ ಸರ್ಕಾರ, ಆದಾಯದಲ್ಲಿ ವಾರ್ಷಿಕವಾಗಿ 70,000 ಕೋಟಿ ರೂ. ಕಡಿತವಾಗಲಿದೆ ಎಂದಿದೆ. ಕೇಂದ್ರದ ತೀರ್ಮಾನಗಳಿಂದ 2016-17 ಮತ್ತು 24-25ರ ನಡುವೆ ಕರ್ನಾಟಕಕ್ಕೆ ಭಾರಿ ನಷ್ಟವಾಗಿದೆ. ಇದೀಗ 24-25ರ ಸಾಲಿನಲ್ಲಿ ಆದಾಯದಲ್ಲಿ 70,000 ಕೋಟಿ ರೂ. ಕಡಿತವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
























