ಪ್ರಮಾಣಕ್ಕೆ ಸ್ಥಳ, ಸಮಯ ನಿಗದಿಪಡಿಸಿ | ಪುತ್ತೂರು ಶಾಸಕ ಅಶೋಕ್ ರೈಗೆ ಪುತ್ತೂರು ಬಿಜೆಪಿ ಪ್ರತಿ ಸವಾಲ್.

ಪುತ್ತೂರು: ಹಿಂದಿನ ಅವಧಿಯಲ್ಲಿ ಅಕ್ರಮ ಸಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಣ ಪಡೆದುಕೊಂಡಿದ್ದಾರೆ ಎಂದು 47 ಮಂದಿ ಫಲಾನುಭವಿಗಳು ನನಗೆ ದೂರು ನೀಡಿದ್ದಾರೆ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪಿಸಿದ್ದು, ಅಲ್ಲವೆಂದಾದಲ್ಲಿ ಸಂಜೀವ ಮಠಂದೂರು ಅವರು ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿ ಸವಾಲ್ ನೀಡಿರುವ ಬಿಜೆಪಿ ಪ್ರಮಾಣಕ್ಕೆ ಮಾಜಿ ಶಾಸಕರು ಸಿದ್ದರಿದ್ದಾರೆ. ಅಶೋಕ್ ರೈ ಅವರು ಪ್ರಮಾಣಕ್ಕೆ ಸ್ಥಳ ಮತ್ತು ಸಮಯ ನಿಗದಿ ಪಡಿಸಿ ಎಂದು ಪ್ರತಿ ಸವಾಲ್ ಹಾಕಿದ್ದಾರೆ.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನ ಸಾಮಾನ್ಯರಿಗೆ ತೊಂದರೆಯಾದಾಗ ವಿಪಕ್ಷದಲ್ಲಿರುವ ಬಿಜೆಪಿ ಮಾತನಾಡುವುದು ಸಹಜ. ಅದರಂತೆ ಪುತ್ತೂರಿನಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ಲಂಚ ಪ್ರಕರಣದ ಬಗ್ಗೆ ನಿಕಟಪೂರ್ವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿದ್ದಾರೆ. ಆದರೆ ಇದನ್ನು ಮರೆ ಮಾಚಲು ಶಾಸಕ ಅಶೋಕ್ ರೈ ಅವರು ಮಾಜಿ ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ದ ಅಶೋಕ್ ರೈ ಅವರು ಆ ಸಂದರ್ಭದಲ್ಲಿ ಯಾಕೆ ನಮ್ಮ ಶಾಸಕರ ಲಂಚ, ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸದೆ ಮೌನ ವಹಿಸಿರುವುದು ಯಾಕೆ? ಆಗ ಮೌನ ವಹಿಸಿ ಇದೀಗ ತಾಲೂಕು ಕಚೇರಿಯ ಸಿಬ್ಬಂದಿಗಳ ಮೇಲ ಲೋಕಾಯುಕ್ತ ದಾಳಿ ನಡೆದಾಗ ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕರು ಹಾಗೂ ಅಂದಿನ ಅಕ್ರಮ ಸಕ್ರಮ ಸಮಿತಿಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಹಾಲಿ ಶಾಸಕರು ಆರೋಪಿಸಿದಂತೆ 47 ಫಲಾನುಭವಿಗಳಿಂದ ಲಂಚ ಪಡೆದುಕೊಂಡಿರುವುದು ನಿಜವಾಗಿದ್ದಲ್ಲಿ, ಶಾಸಕರಿಗೆ ತಾಖತ್ತಿದ್ದಲ್ಲಿ ಆ 47 ವ್ಯಕ್ತಿಗಳನ್ನು ಕರೆದುಕೊಂಡು ಬರಲಿ. ನಾವು ಮಾಜಿ ಶಾಸಕರು ಹಾಗೂ ಅಂದಿನ ಅಕ್ರಮ ಸಕ್ರಮ ಸಮಿತಿ ಸದಸ್ಯರನ್ನು ಕರೆದುಕೊಂಡು ಬರುತ್ತೇವೆ. ಶಾಸಕರೇ ಸ್ಥಳ ಮತ್ತು ಸಮಯವನ್ನು ನಿಗದಿ ಪಡಿಸಲಿ. ಶಾಸಕರು ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರಿಗೆ ಕಲ್ಲು ಹೊಡೆಯುತ್ತಿದ್ದಾರೆ. ಅವರ ಜಾತಕ ನಮ್ಮಲ್ಲಿಯೂ ಇದೆ. ಸಮಯ ಸಂದರ್ಭ ಬಂದಾಗ ಅವರ ಜನ್ಮ ಜಾಲಾಡಿಸುವ ಕೆಲಸ ನಾವೂ ಮಾಡುತ್ತೇವೆ ಎಂದು ಪ್ರತಿ ಸವಾಲು ಹಾಕಿದ್ದಾರೆ.





















































 
 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತ ಮಂಡಲ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ, ಮುಖಂಡ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

error: Content is protected !!
Scroll to Top