ಪುತ್ತೂರು: ಅಕ್ಷಯ ಕಾಲೇಜಿನ ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ಮತ್ತು ಐಕ್ಯೂಎಸಿ ಯಿಂದ “ಬ್ರಿಡ್ಜಿಂಗ್ ದಿ ಗ್ಯಾಪ್ – ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ ಸೇತುವೆ” ಎಂಬ ವಿಚಾರ ಸಂಕಿರಣ ಇತ್ತೀಚೆಗೆ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಿವಿಷನ್ ಎಫ್ ಜಿಲ್ಲೆ 121 ರ ಡಿವಿಷನ್ ಡೈರೆಕ್ಟರ್ ಡಾ. ಮೀರಾ ಎ. ರಾವ್, ತಾಂತ್ರಿಕ ಜ್ಞಾನದಿಂದ ಶಕ್ತಿಶಾಲಿ ಸಂವಹನಕ್ಕೆ ಎಂಬ ವಿಷಯವನ್ನು ವಿವರಿಸುತ್ತಾ, ತಂತ್ರಜ್ಞಾನದ ಭಾಷೆಯನ್ನು ಸಾಮಾನ್ಯ ಮಾನವನ ಭಾಷೆಗೆ ಭಾಷಾಂತರಿಸುವುದು ಹಿಂದಿನಿಂದಲೂ ಒಂದು ದೊಡ್ಡ ಅಗತ್ಯವಾಗಿದೆ. ನೀವು ಹೊಂದಿರುವ ಜ್ಞಾನವನ್ನು ನಿಮ್ಮ ಗ್ರಾಹಕ, ಸಹೋದ್ಯೋಗಿ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿ ಅರ್ಥಮಾಡಿಕೊಳ್ಳುವಂತೆ ಮಾಡುವುದೇ ನಿಜವಾದ ಸಂವಹನ ಕಲೆ. ಇದರಿಂದ ಮಾತ್ರ ನಿಮ್ಮ ತಾಂತ್ರಿಕ ಪರಿಜ್ಞಾನಕ್ಕೆ ಮೌಲ್ಯ ಲಭಿಸುತ್ತದೆ ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಗೈನಕಾಲಜಿಸ್ಟ್ ಡಾ. ಭಾರತಿ ಶೆಟ್ಟಿ ಮಾತನಾಡಿ, ಸಿದ್ಧಾಂತವನ್ನು ಕೇವಲ ಕೇಳುವುದರಿಂದ ಬರದು, ಅದನ್ನು ಪ್ರಾಯೋಗಿಕವಾಗಿ ಅನುಭವಿಸಿದಾಗ ಮಾತ್ರ ಅದು ನಮ್ಮದಾಗುತ್ತದೆ. ಈ ಚಟುವಟಿಕೆಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ನಿಮ್ಮ ಚಿಂತನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸಂಸ್ಥೆಯ ಸಂಚಾಲಕ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿ, ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ತಾಂತ್ರಿಕ ಪಾಂಡಿತ್ಯ ಮತ್ತು ಸಂವಹನ ಕೌಶಲ್ಯ ಇವೆರಡರೂ ಸಮಾನ ಪ್ರಾಮುಖ್ಯತೆ ಹೊಂದಿವೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಿಯೋ ಇನೋವೇಶನ್ & ಸ್ಕಿಲ್ಸ್ ಪ್ರೈವೇಟ್ ಲಿಮಿಟೆಡ್ ನ ಚೀಫ್ ಸ್ಟ್ರಾಟಜೀ ಆಫೀಸರ್ ವಸುಮತಿ ಶೆಟ್ಟಿ, ಕಾಲೇಜಿನ ಪ್ರಿನ್ಸಿಪಾಲ್ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಐಕ್ಯೂಎಸಿ ಸಂಯೋಜಕಿ ರಶ್ಮಿ ಕೆ., ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ದೀಕ್ಷಾ ರೈ, ಉಪಸ್ಥಿತರಿದ್ದರು.
ಲಾವಣ್ಯ ಪ್ರಾರ್ಥಿಸಿದರು. ಬೈಟ್-ಬ್ಲಿಟ್ಜ್ ಐಟಿ ಕ್ಲಬ್ ಸಂಯೋಜಕಿ ಸೌಜನ್ಯ ಹೆಚ್. ಸ್ವಾಗತಿಸಿದರು. ಉಪನ್ಯಾಸಕಿ ಪ್ರತಿತಾ ಡಿ, ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಕಾರ್ತಿಕ್ ಪಿ ರೈ, ವಂದಿಸಿ, ಅಫೀಜ ನಿರೂಪಿಸಿದರು.
























