ವಿಜಯಪುರ: ಪಾಪಿ ತಂದೆಯಿಂದಲೇ ಐದು ವರ್ಷದ ಮಗುವೊಂದು ಅತ್ಯಾಚಾರಕ್ಕೆ ಒಳಗಾದ ಘಟನೆ ವಿಜಯಪುರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಸುಮಾರು 2 ವರ್ಷಗಳಿಂದ ಇಂಡಿ ತಾಲೂಕಿನ ದಂಪತಿ ತಮ್ಮಿಬ್ಬರು ಹೆಣ್ಣು ಮಕ್ಕಳ ಜೊತೆ ವಿಜಯಪುರದಲ್ಲಿ ವಾಸವಿದ್ದಾರೆ. ಪತಿ, ಪತ್ನಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ಆಗಾಗ ಇವರಿಬ್ಬರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಆ.30ರಂದು ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಮಕ್ಕಳು ಗಣಪತಿ ನೋಡಲು ಹೋಗಿದ್ದರು. ಮರಳಿ ಬರಬೇಕಾದರೆ ಎರಡನೇ ಮಗಳು ಅಳುತ್ತಾ ಮನೆಗೆ ಬಂದಿದ್ದಳು. ಆಗ ವಿಚಾರಿಸಿದಾಗ ತಂದೆಯೇ ಬಲತ್ಕಾರ ಎಸಗಿರುವುದು ಗೊತ್ತಾಗಿದೆ ಎಂದು ತಾಯಿ ದೂರಿನಲ್ಲಿ ಹೇಳಿದ್ದಾರೆ.
ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಘಟನೆ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ಧರಿಸಿದೆ. ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
























