ಎಡಬಿಡಂಗಿ ಹೇಳಿಕೆ ನೀಡಿದ ಟ್ರಂಟ್ ಸಲಹೆಗಾರ ಪೀಟರ್ ನವರೊ
ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಎಡಬಿಡಂಗಿ ಹೇಳಿಕೆ ನೀಡಿದ್ದಾರೆ. ಚೀನದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೋದಿ, ಪುಟಿನ್, ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸುತ್ತಿರುವ ಮಹತ್ವದ ಸಮಯದಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.
ಮೋದಿ ಒಬ್ಬ ಮಹಾನ್ ನಾಯಕ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವಾಗ ಅವರು ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಜೊತೆ ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ನಾನು ಭಾರತೀಯ ಜನರಿಗೆ ಹೇಳುತ್ತೇನೆ, ದಯವಿಟ್ಟು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಭಾರತೀಯ ಜನರ ವೆಚ್ಚದಲ್ಲಿ ಬ್ರಾಹ್ಮಣರು ಲಾಭ ಗಳಿಸಿ ಶ್ರೀಮಂತರಾಗುತ್ತಿದ್ದಾರೆ. ಇದನ್ನು ನಾವು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ತನ್ನ ಒತ್ತಡಕ್ಕೆ ಭಾರತ ಬಗ್ಗದೆ ಸಡ್ಡು ಹೊಡೆದ ಬೆನ್ನಲ್ಲೇ ಹತಾಶೆಗೊಂಡಿರುವ ಟ್ರಂಪ್ ಸರ್ಕಾರದ ಅಧಿಕಾರಿಗಳು ಈಗ ನರೇಂದ್ರ ಮೋದಿ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡಲು ಆರಂಭಿಸಿದ್ದಾರೆ.
ಭಾರತಕ್ಕೆ ಈಗ ಅಹಂಕಾರ ಬಂದಿದೆ. ನಮಗೆ ಹೆಚ್ಚಿನ ಸುಂಕಗಳು ಇಲ್ಲ. ನಮ್ಮದು ಸಾರ್ವಭೌಮ ಹೊಂದಿದ ದೇಶ. ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು ಎಂಬಂತೆ ಭಾರತ ವರ್ತಿಸುತ್ತಿದೆ. ಭಾರತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಹೌದು. ಆದರೆ ಅಮೆರಿಕದ ವಿಶ್ವದ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿದೆ. ಭಾರತ ಮಾಡುತ್ತಿರುವ ಕೆಲಸಗಳಿಂದ ಅಮೆರಿಕದಲ್ಲಿರುವ ಪ್ರತಿಯೊಬ್ಬರೂ ನಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ ನವರೊ.
























