ಡಿಕ್ಕಿಯ ರಭಸಕ್ಕೆ 50 ಮೀಟರ್ ದೂರ ಎಸೆಯಲ್ಪಟ್ಟ ಸವಾರ
ಸುರತ್ಕಲ್: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಸುರತ್ಕಲ್ ಸಮೀಪ ಮುಕ್ಕ ಜಂಕ್ಷನ್‌ನಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ (61) ಎಂದು ಗುರುತಿಸಲಾಗಿದೆ. ಚೇಳಾಯರಿನ ಹನುಮಂತ ಎಂಬವರ ಮಗ ವಿಶ್ವನಾಥ (16) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಎಸಗಿದ ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರುಣಾಕರ ಶೆಟ್ಟಿ ಮುಕ್ಕದಲ್ಲಿರುವ ಅಂಗಡಿ ಮುಚ್ಚಿ ಹಾಲಿಗೆ ಬಂದಿದ್ದ ನೆರೆ ಮನೆಯ ವಿಶ್ವಾನಾಥ ಅವರನ್ನು ಕುಳ್ಳಿರಿಸಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ದಾಟಿತ್ತಿದ್ದ ವೇಳೆ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕರುಣಾಕರ ಶೆಟ್ಟಿ ಅವರು ಸುಮಾರು 50 ಮೀಟರ್ ದೂರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಅಪ್ಪಳಿಸಿದ್ದು, ತಲೆಗೆ ಬಲವಾದ ಹೊಡೆತ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದ ಹಿಂಬದಿ ಸವಾರರಾಗಿದ್ದ ವಿಶ್ವನಾಥ ಅವರಿಗೆ ಕೈಕಾಲಿಗೆ ಗಂಭೀರ ಗಾಯಗಳಾಗಿದ್ದು, ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
























