ಅವಶೇಷಗಳಡಿ ಸಿಲುಕಿರುವ ನೂರಾರು ಮಂದಿಯ ರಕ್ಷಣೆಗೆ ಹರಸಾಹಸ
ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಗಡಿಯ ಸನಿಹ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 115 ಮಂದಿ ಗಾಯಗೊಂಡಿದ್ದಾರೆ. ಭೂಕಂಪ ಬಹಳ ಪ್ರಬಲವಾಗಿದ್ದು ಇನ್ನೂ ಅನೇಕ ಮಂದಿ ಅವೇಷಗಳಡಿ ಸಿಲುಕಿರುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಗಾಯಾಳುಗಳನ್ನು ನಂಗ್ರಾರ್ ಮತ್ತು ಕುನಾರ್ ಪ್ರಾಂತ್ಯದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾನುವಾರ ತಡರಾತ್ರಿ ಈ ಭೂಕಂಪ ಸಂಭವಿಸಿದ್ದು, ಆ ಬಳಿಕ ಪಶ್ಚಾತ್‌ಕಂಪನದ ಅನುಭವ ಆಗುತ್ತಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಹೇಳಿದೆ. ಭೂಕಂಪ ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11.47ಕ್ಕೆ ಸಂಭವಿಸಿದೆ. ಈ ಭೂಕಂಪ ಭೂಮಿಯ 8 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಇದರ ಕೇಂದ್ರ ಬಿಂದು ಜಲಾಲಾಬಾದ್‍ನಿಂದ 27 ಕಿಲೋಮೀಟರ್ ಪೂರ್ವ-ಈಶಾನ್ಯಕ್ಕೆ ಇತ್ತು ಎಂದು ವಿವರಿಸಿದೆ. ದೆಹಲಿ ತನಕ ಭೂಕಂಪದ ಅನುಭವ ಆಗಿದೆ.
ಮನೆಗಳ ಛಾವಣಿಗಳು ಕುಸಿದು ಬಿದ್ದು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾಗಿ ಪ್ರಾಂತೀಯ ಅಧಿಕಾರಿಗಳು ಹೇಳಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಆರಂಭಿಕ ವರದಿಗಳು ಹೇಳಿವೆ. ಪೂರ್ವ ಅಫ್ಘಾನಿಸ್ತಾನದ ಹಲವು ಕಡೆಗಳಲ್ಲಿ ಕಟ್ಟಡಗಳು ಹಲವು ಸೆಕೆಂಡ್‍ಗಳ ಕಾಲ ಕಂಪಿಸಿವೆ. 370 ಕಿಲೋಮೀಟರ್ ದೂರದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಕೂಡಾ ಭೂಕಂಪ ಸಂಭವಿಸಿದೆ.
ಅಫಘಾನಿಸ್ತಾನದ ತಾಲಿಬಾನ್ ಸರ್ಕಾರ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ನೆರವಾಗುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.
























