ಮಧ್ಯಾಹ್ನ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ
ಬೆಂಗಳೂರು: ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡುವಂತೆ ಒತ್ತಾಯಿಸಿ ಸೋಮವಾರ ಬೃಹತ್ ಧರ್ಮಸ್ಥಳ ಚಲೋ ಅಭಿಯಾನ ಹಾಗೂ ಧರ್ಮ ಜಾಗೃತಿ ಸಮಾವೇಶ ಬಿಜೆಪಿ ನಡೆಸಲಿದೆ.
ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯವಸ್ಥಿತ ಷಡ್ಯಂತ್ರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸಲಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆನ್ನುವುದು ಬಿಜೆಪಿಯ ಪ್ರಮುಖ ಬೇಡಿಕೆಯಾಗಿದೆ.
ಧರ್ಮಸ್ಥಳ ಚಲೋ ಅಭಿಯಾನಕ್ಕಾಗಿ ವಾರದಿಂದಲೇ ವ್ಯಾಪಕ ತಯಾರಿ ನಡಸಲಾಗಿದ್ದು, ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶ.
ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿಯ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಆಯಾಯ ಕ್ಷೇತ್ರಗಳಿಂದಲೇ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಬರಲು ಸೂಚಿಸಲಾಗಿದೆ. ಬಿಜೆಪಿ ನಾಯಕರು ಮೊದಲು ಮಂಜುನಾಥನ ದರ್ಶನ ಮಾಡಿ ಬಳಿಕ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ.
ಮಧ್ಯಾಹ್ನ 2ಕ್ಕೆ ಧರ್ಮಸ್ಥಳದಲ್ಲಿ ಬೃಹತ್ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ. ಧರ್ಮಸ್ಥಳ ವಿರುದ್ಧ ಪಿತೂರಿ, ಸಂಚು ನಡೆಯುತ್ತಿದೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು. ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.
























