ನವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನನ್ನೂ ದುಃಖಕ್ಕೆ ದೂಡಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳು ದೇಶವನ್ನು ಪರೀಕ್ಷೆಗೆ ಒಡ್ಡಿದೆ. ಪರಿಸರ ಮತ್ತು ಮಾನವನಿಗೆ ಸಾಕಷ್ಟು ಹಾನಿಗಳಾಗಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಪ್ರವಾಹ, ಭೂಕುಸಿತದಂತಹ ಹಲವಾರು ಪ್ರಾಕೃತಿಕ ವಿನಾಶ ಕಂಡಿದ್ದೇವೆ. ಜನರ ಜೀವನ ಅಪಾಯದಲ್ಲಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ದುಃಖ ತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ನಾವೆಲ್ಲರೂ ಹಂಚಿಕೊಳ್ಳುತ್ತೇವೆ ಎಂದು ನುಡಿದಿದ್ದಾರೆ.
ಹಾಗೆಯೇ ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸೌರಶಕ್ತಿಯ ಮಹತ್ವವನ್ನು ಸಾರಿ ಹೇಳಿರುವ ಅವರು, ಇತ್ತೀಚಿನ ದಿನಗಳಲ್ಲಿ ಮನೆಗಳ ಮೇಲ್ಚಾವಣಿ, ದೊಡ್ಡ ಕಟ್ಟಡಗಳ ಮೇಲೆ, ಸರ್ಕಾರಿ ಕಟ್ಟಡಗಳ ಮೇಲೆ ಸೌರ ಫಲಕಗಳು ಹೊಳೆಯುವುದನ್ನು ಕಾಣಬಹುದು. ಈಗ ಜನರಿಗೆ ಸೌರಶಕ್ತಿಯ ಮಹತ್ವದ ಅರಿವಾಗಿದೆ. ಸೂರ್ಯನಿಂದ ಸಿಗುವ ಶಕ್ತಿಯನ್ನು ನಾವು ಏಕೆ ಬಳಕೆ ಮಾಡಿಕೊಳ್ಳಬಾರದು ಅಲ್ಲವೇ ಎಂದು ಕೇಳಿದ್ದಾರೆ.
























