ಕಾರು ದಡದಲ್ಲಿ ನಿಲ್ಲಿಸಿ ನದಿಯಲ್ಲಿ ಈಜಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಉಡುಪಿ : ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದ ಬೆಂಗಳೂರಿನ ವಿವಾಹಿತ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದು ನಾಪತ್ತೆಯಾಗಿದ್ದು, ಈ ಪ್ರಕರಣ ಅನೇಕ ಊಹಾಪೋಹಗಳಿಎಗ ಕಾರಣವಾಗಿದೆ. ನಾಪತ್ತೆಯಾದ ಮಹಿಳೆಯನ್ನು ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ಸಿ.ಆರ್. ಗೋವಿಂದರಾಜು ಎಂಬವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ.
ಆಗಸ್ಟ್ 28ರಂದು ಅವರು ಕೊಲ್ಲೂರಿಗೆ ಆಗಮಿಸಿ, ಖಾಸಗಿ ಲಾಡ್ಜ್ ಬಳಿ ತಮ್ಮ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದರು. ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಅವರು ಬೇರೆ ಬೇರೆ ದೇಗುಲಗಳಿಗೆ ತೆರಳಿ ನಂತರ ಸೌಪರ್ಣಿಕಾ ನದಿಯತ್ತ ತೆರಳಿ ಬಳಿಕ ನಾಪತ್ತೆಯಾಗಿದ್ದಾರೆ.
ಪೊಲೀಸರು ಮತ್ತು ಸ್ಥಳೀಯರು ಸೌಪರ್ಣಿಕಾ ನದಿಯ ಸುತ್ತಮುತ್ತ ವ್ಯಾಪಕ ಶೋಧ ಕಾರ್ಯ ನಡೆಸಿದರೂ ಅವರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಅವರ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳು ಕಾರಿನಲ್ಲಿ ಪತ್ತೆಯಾಗಿದ್ದು, ಇದು ಪೊಲೀಸರಿಗೆ ಅವರ ಗುರುತು ಪತ್ತೆಹಚ್ಚಿ ಅವರ ಕುಟುಂಬಕ್ಕೆ ಮಾಹಿತಿ ನೀಡಲು ಸಹಾಯ ಮಾಡಿದೆ.
ಸೌಪರ್ಣಿಕಾ ನದಿಯ ಬಳಿ ಅಳವಡಿಸಿರುವ ಸಿಸಿಟಿವಿಯಲ್ಲಿ ಅವರು ನದಿಯಲ್ಲಿ ಈಜುತ್ತಿರುವ ದೃಶ್ಯ ಕಂಡುಬಂದಿದೆ. ವಸುಧಾ ಉತ್ತಮ ಈಜುಗಾರ್ತಿ ಎಂದು ತಿಳಿದುಬಂದಿದ್ದು, ಅವರು ಬಹುದೂರದವರೆಗೆ ಈಜುತ್ತಿರುವುದು ಕಂಡುಬಂದಿದೆ. ಅವರು ದಡವನ್ನು ತಲುಪಲು ಯಶಸ್ವಿಯಾಗಿದ್ದಾರೆಯೇ ಅಥವಾ ಸೌಪರ್ಣಿಕಾ ನದಿಯ ಪ್ರಬಲ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಈಶ್ವರ್ ಮಲ್ಪೆ ಸೇರಿದಂತೆ ಪರಿಣಿತ ಈಜುಗಾರರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡದೊಂದಿಗೆ ನದಿಯ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಅವರ ಪೋಷಕರು ಮತ್ತು ಕುಟುಂಬ ಸದಸ್ಯರು ಕೊಲ್ಲೂರಿಗೆ ಆಗಮಿಸಿದ್ದಾರೆ. ವಸುಧಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವಿವಾಹವಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ವಸುಧಾ ಅವರು ಏಕಾಂಗಿಯಾಗಿ ಭೇಟಿ ನೀಡುತ್ತಿದ್ದರು. ಅವರು ಧ್ಯಾನದ ಕಡೆಗೆ ಒಲವು ತೋರುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
























