ಬೆಂಗಳೂರು : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಎಐಸಿಸಿ ಹೆಸರಲ್ಲಿ ಕರೆ ಮಾಡಿ ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ದಿಲ್ಲಿಯ ಎಐಸಿಸಿ ಕಚೇರಿಯಿಂದ ಮಾತಾಡುತ್ತಿದ್ದೇವೆ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದಾರೆ.
8287309623 ಮೊಬೈಲ್ ನಂಬರ್ನಿಂದ ಅಪರಿಚಿತ ವ್ಯಕ್ತಿಗಳು ಆಕಾಂಕ್ಷಿಗಳಿಗೆ ಕರೆ ಮಾಡಿ ಹಣ ಸುಲಿಯಲು ಯತ್ನಿಸಿದ್ದಾರೆ. 2 ಮತ್ತು 3ನೇ ಸ್ತರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವಂಚಕರು ಕರೆ ಮಾಡಿ ವಿಧಾನಸಭಾ ಚುನಾವಣೆ ಸ್ಪರ್ಧೆ ಸಂಬಂಧ ಪಟ್ಟಿ ಸಿದ್ಧಗೊಂಡಿದೆ. ಚುನಾವಣೆ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಆಸೆ ಹುಟ್ಟಿಸಿದ್ದಾರೆ.
ಬಳಿಕ ದಯವಿಟ್ಟು ನಿಮ್ಮ ಗುರುತಿನ ಚೀಟಿ ಜತೆ ಹಣ ಕಳುಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಗುರುತಿನ ಚೀಟಿಯ ಜತೆ 48 ಸಾವಿರ ರೂ. ಕಳುಹಿಸುವಂತೆ ಹೇಳಿದ್ದಾರೆ. ಈ ಕುರಿತು ಪಕ್ಷದ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಂತಹ ಕರೆಗಳಿಗೆ ಕಿವಿಗೊಡದಂತೆ ಎಚ್ಚರವಹಿಸುಂತೆ ಸೂಚನೆ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಗಳಿಗೆ ಕರೆ ಮಾಡಿರುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.