ಸರ್ಚ್ ವಾರಂಟ್‌ನೊಂದಿಗೆ ಹೋಗಿ ಮನೆ ಶೋಧಿಸುತ್ತಿರುವ ಎಸ್‌ಐಟಿ ತಂಡ
ಬೆಳ್ತಂಗಡಿ: ಧರ್ಮಸ್ಥಳ ಕೇಸಿನ ಬುರುಡೆಮ್ಯಾನ್ ಸಿ.ಎನ್.ಚಿನ್ನಯ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಕೆಲದಿನ ತಂಗಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತಿಮರೋಡಿ ಮತ್ತು ಅವರ ಸಹೋದರನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ ಚಿನ್ನಯ್ಯ ಈಗ ಎಸ್‌ಐಟಿ ಬಂಧನದಲ್ಲಿದ್ದು, ವಿಚಾರಣೆ ವೇಳೆ ತಾನು ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ತಿಮರೋಡಿ ಮತ್ತು ಅವರ ಸಹೋದರನ ಮನೆಗೆ ತೆರಳಿದೆ.
ತಿಮರೋಡಿಯವರ ಬಳಿ ಇರುವ ಮೊಬೈಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿದ್ದು ಈ ಸಂಬಂಧ ಮನೆಯಿಡೀ ಎಸ್‌ಐಟಿ ತಂಡ ಶೋಧ ನಡೆಸುತ್ತಿದೆ. ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್ ವಾರಂಟ್ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಜೊತೆಯಲ್ಲಿ ಕರೆದುಕೊಂಡು ಉಜಿರೆಯಲ್ಲಿರುವ ತಿಮರೋಡಿ ಮನೆಗೆ ತೆರಳಿ ಮಹಜರು ನಡೆಸುತ್ತಿದ್ದಾರೆ.
ಎಸ್‌ಐಟಿ ಉತ್ಖನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ಹೇಳಿದ್ದ.
ಈ ಕಾರಣಕ್ಕೆ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮತ್ತು ಮೊಬೈಲ್ ಸಂಗ್ರಹಿಸಲು ಪೊಲೀಸರು ತಿಮರೋಡಿ ನಿವಾಸಕ್ಕೆ ಹೋಗಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿಗೆ ಉಜಿರೆಯ ನಿವಾಸದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಕಳೆದ ಎರಡು ತಿಂಗಳಿಂದ ಅಶ್ರಯ ನೀಡಿದ್ದರಿಂದ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಯುತ್ತಿದೆ ಎನ್ನಲಾಗಿದೆ.
























