ಲ್ಯಾಂಡಿಂಗ್‌ ಸಮಸ್ಯೆ : ಬೆಂಗಳೂರಿಗೆ ಹೋದ ಮಂಗಳೂರಿನಲ್ಲಿ ಇಳಿಯಬೇಕಾದ ವಿಮಾನ

ತಾಂತ್ರಿಕ ದೋಷದಿಂದ ಮಂಗಳೂರಿನಲ್ಲಿ ಇಳಿಯಲು ಸಾಧ್ಯವಾಗದೆ ಪ್ರಯಾಣಿಕರು ಹೈರಾಣ

ಮಂಗಳೂರು: ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬೆಂಗಳೂರಲ್ಲಿ ಲ್ಯಾಂಡ್‌ ಆದ ಘಟನೆ ಸೋಮವಾರ ಸಂಭವಿಸಿದೆ. ಮಂಗಳೂರಿನಲ್ಲಿ ಮೂರು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಪಟ್ಟರೂ ವಿಫಲವಾದ ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ವಿಮಾನದಲ್ಲಿ 157 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ದುಬೈನಿಂದ ಮಂಗಳೂರಿಗೆ ಭಾನುವಾರ ರಾತ್ರಿ ಹೊರಟಿತ್ತು. ಈ ವಿಮಾನ ದುಬೈಯಲ್ಲಿ ರಾತ್ರಿ 11.40ಕ್ಕೆ ಟೇಕ್‌ ಆಫ್‌ ಆಗಿ ಭಾರತೀಯ ಕಾಲಮಾನ ಬೆಳಗ್ಗೆ 5.05ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ 1 ಗಂಟೆ 45 ನಿಮಿಷ ತಡವಾಗಿ ಹೊರಟಿತ್ತು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 1.15ಕ್ಕೆ ಹೊರಟ ಈ ವಿಮಾನ ಸೋಮವಾರ ಬೆಳಗ್ಗೆ 6 ಗಂಟೆಗೆ ಲ್ಯಾಂಡ್‌ ಆಗಬೇಕಿತ್ತು.





















































 
 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವೇ ಕ್ಷಣದಲ್ಲಿ ವಿಮಾನ ಲ್ಯಾಂಡ್‌ ಆಗಲಿದೆ ಎಂದು ವಿಮಾನದ ಸಿಬ್ಬಂದಿ ಮಾಹಿತಿ ನೀಡಿದ್ದರು. ಈ ಸೂಚನೆ ನೀಡಿದ ಕೆಲವೇ ಕ್ಷಣದಲ್ಲಿ ವಿಮಾನ ಲ್ಯಾಂಡಿಂಗ್‌ಗೆ ಸಾಗುತ್ತಿತ್ತು. ಆದರೆ ಲ್ಯಾಂಡಿಂಗ್‌ಗೆ ತಾಂತ್ರಿಕ ಸಮಸ್ಯೆ (ರನ್‌ ವೇ ವಿಸ್ತಾರ ಕಡಿಮೆ) ಉಂಟಾದ ಕಾರಣ ವಿಮಾನ ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಪೈಲಟ್‌ ಮೂರು ಬಾರಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪ್ರಯತ್ನಪಟ್ಟರೂ ಅದಕ್ಕೆ ಗ್ರೀನ್‌ ಸಿಗ್ನಲ್‌ ಸಿಗಲಿಲ್ಲ.

ಕೊನೆಗೆ ಪೈಲಟ್‌ ವಿಮಾನವನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಕೊಂಡೊಯ್ದರು. ಬೆಂಗಳೂರಿನಲ್ಲಿ ಲ್ಯಾಂಡಿಂಗ್‌ಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ ಕಾರಣ ಬೆಳಗ್ಗೆ 7.07ಕ್ಕೆ ಲ್ಯಾಂಡ್‌ ಆಯಿತು. ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್‌ ಆದ ಬಳಿಕ ಏರ್‌ಲೈನ್ಸ್‌ ಸಿಬ್ಬಂದಿ ತಾಂತ್ರಿಕ ಸಮಸ್ಯೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆದ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್‌ ಆದ ಬಳಿಕ ಸುಮಾರು 1.30 ಗಂಟೆ ಕಾಲ ಪ್ರಯಾಣಿಕರು ಯಾವುದೇ ಸಮರ್ಪಕ ಮಾಹಿತಿ ಸಿಗದೆ ವಿಮಾನದಲ್ಲೇ ಬಾಕಿಯಾಗಿದ್ದರು. ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ವಿಮಾನದಲ್ಲಿದ್ದ ಕಾರಣ ಸಮಸ್ಯೆಯಾಗಿತ್ತು. ಇದರಿಂದ ಬೇಸತ್ತ ಪ್ರಯಾಣಿಕರು ವಿಮಾನ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿ ಲಘು ಉಪಾಹಾರ ವ್ಯವಸ್ಥೆ ಮಾಡಿದರು.

ವಿಮಾನದಲ್ಲೇ 1.45 ನಿಮಿಷ ಕಾದು ಕುಳಿತ ಬಳಿಕ ವಿಮಾನ ಸಿಬ್ಬಂದಿ ಬೇರೆ ವಿಮಾನದಲ್ಲಿ ಮಂಗಳೂರಿಗೆ ಕಳುಹಿಸಿಕೊಡುವ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಬ್ಯಾಗ್‌ ಚೆಕ್ಕಿಂಗ್‌ ಸೇರಿದಂತೆ ಎಲ್ಲ ಕಾರ್ಯವಿಧಾನಗಳನ್ನು ನಡೆಸಲಾಯಿತು. 10.30ಕ್ಕೆ ಚೆಕ್ಕಿಂಗ್‌ ಆರಂಭವಾಗಿ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ವಿಮಾನ ಹೊರಟು 12.05ಕ್ಕೆ ಮಂಗಳೂರಿಗೆ ತಲುಪಿತು.

ಬೆಳಗ್ಗೆ 5.05ಕ್ಕೆ ಆಗಮಿಸಬೇಕಿದ್ದ ಪ್ರಯಾಣಿಕರಿಗೆ ಸಂಬಂಧಿಕರು, ವಾಹನ ಚಾಲಕರು ವಿಮಾನ ನಿಲ್ದಾಣ ಹೊರಗಡೆ ಹಲವು ಮಂದಿ ವಾಹನದಲ್ಲಿ ಕಾಯುತ್ತಿದ್ದರು. 2 ಗಂಟೆಯಾದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಎಲ್ಲರೂ ಕಾದು ಸುಸ್ತಾದರು.

error: Content is protected !!
Scroll to Top