ತಲೆಬುರುಡೆ ಕುರಿತು ಆರಂಭದಲ್ಲಿ ಯಾಕೆ ತನಿಖೆ ಮಾಡದಿರುವುದು ಲೋಪ ಎಂದ ರಾಜಣ್ಣ
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ತಪ್ಪು ಹೆಜ್ಜೆಯಿಟ್ಟಿತ್ತು ಎಂದು ಮಾಜಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಭಾನುವಾರ ತಮ್ಮದೇ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಲು ಬಂದ ವ್ಯಕ್ತಿಯು ತಂದಿದ್ದ ತಲೆಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ. ಭೂಮಿಯಲ್ಲಿ ಹೂತ ಮೃತದೇಹವನ್ನು ಹೊರತೆಗೆಯಲು ಕಾನೂನಿನಲ್ಲಿ ನಿರ್ದಿಷ್ಟ ನಿಯಮಗಳಿವೆ. ತಾಲೂಕು ಮ್ಯಾಜಿಸ್ಟ್ರೇಟ್ ಅನುಮತಿ ಮತ್ತು ಉಪಸ್ಥಿತಿಯಲ್ಲಿ ಮಾತ್ರ ದೇಹವನ್ನು ಹೊರತೆಗೆಯಬೇಕು, ಇದನ್ನು ‘ಎಕ್ಸ್ಯೂಮ್’ ಎನ್ನಲಾಗುತ್ತದೆ. ಆದರೆ ಧರ್ಮಸ್ಥಳ ಪ್ರಕರಣದಲ್ಲಿ ತಲೆಬುರುಡೆ ತಂದ ವ್ಯಕ್ತಿಯನ್ನು ವಿಚಾರಣೆಗೆ ಗುರಿಪಡಿಸದೆ, ತಲೆಬುರುಡೆಯ ಬಗ್ಗೆ ತನಿಖೆ ನಡೆಸದೆ ದಿಢೀರ್ ಎಂದು ಎಸ್‌ಐಟಿ ರಚನೆ ಮಾಡಿದ್ದು ಸರಿಯಾದ ನಿರ್ಧಾರವಾಗಿರಲಿಲ್ಲ ಎಂದು ರಾಜಣ್ಣ ತನ್ನದೇ ಸರ್ಕಾರದ ಲೋಪವನ್ನು ಎತ್ತಿತೋರಿಸಿದ್ದಾರೆ.
ಈ ಪ್ರಕರಣದಲ್ಲಿ ತಲೆಬುರುಡೆಯನ್ನು ಕಾನೂನುಬಾಹಿರವಾಗಿ ತರಲಾಗಿದ್ದು, ಇದನ್ನು ಎಲ್ಲಿಂದ, ಹೇಗೆ ಮತ್ತು ಯಾರ ಆದೇಶದ ಮೇರೆಗೆ ತೆಗೆಯಲಾಗಿದೆ ಎಂಬುದನ್ನು ಮೊದಲು ತನಿಖೆ ಮಾಡಬೇಕು. ಇದು ಕೇವಲ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚು ಎಂದು ಅವರು ಆರೋಪಿಸಿದ್ದಾರೆ.
ರಾಜಣ್ಣ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಬಿಜೆಪಿ ಕೂಡ ಇದನ್ನೇ ಆರಂಭದಿಂದಲೂ ಪ್ರಶ್ನಿಸಿತ್ತು. ಹೂತು ಹಾಕಿದ್ದ ಶವದ ಬುರುಡೆ ಈ ಷಡ್ಯಂತ್ರಕಾರರಿಗೆ ಸಿಕ್ಕಿದ್ದೆಲ್ಲಿ ಎನ್ನುವುದನ್ನು ಪತ್ತೆಹಚ್ಚಲು ಸರ್ಕಾರ ನಿರ್ದೇಶನ ನೀಡಬೇಕಿತ್ತು, ಆದರೆ ಸರ್ಕಾರ ನಗರ ನಕ್ಸಲರ ತಾಳಕ್ಕೆ ತಕ್ಕಂತೆ ಕುಣಿದದ್ದು ದುರಂತವೇ ಸರಿ ಎಂದು ಟೀಕಿಸಿದೆ.
























