ಯಶ್, ಪುನೀತ್ ರಾಜ್‌ಕುಮಾರ್ ಮುಂತಾದವರ ಜೊತೆ ನಟಿಸಿದ್ದ ಪ್ರತಿಭಾವಂತ
ಉಡುಪಿ : ಕನ್ನಡ ಚಿತ್ರರಂಗದ ನಟ ಮತ್ತು ಕಲಾ ನಿರ್ದೇಶಕ ದಿನೇಶ್ ಮಂಗಳೂರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ, ‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ನಟಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಕುಂದಾಪುರದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳೂರ್ ಇನ್ನಿಲ್ಲ… ಹೋಗಿ ಬಾ ಮಿತ್ರ ಎಂದು ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ದಿನೇಶ್ ಮಂಗಳೂರು ಅವರು ಹಲವು ಐಕಾನಿಕ್ ಪಾತ್ರಗಳಿಗೆ ಜೀವ ತುಂಬಿದ್ದರು. 90ರ ದಶಕದಿಂದಲೂ ದಿನೇಶ್ ಮಂಗಳೂರು ಕನ್ನಡ ಚಿತ್ರರಂಗದೊಂದಿಗೆ ನಂಟನ್ನು ಹೊಂದಿದ್ದರು. ‘ಆ ದಿನಗಳು’ ಸಿನಿಮಾದಲ್ಲಿನ ಅವರ ಸೀತಾರಾಮ್ ಶೆಟ್ಟಿ ಪಾತ್ರಕ್ಕೆ ಭಾರಿ ಮೆಚ್ಚುಗೆ ಸಿಕ್ಕಿತ್ತು.
ಬಳಿಕ ರಕ್ಷಿತ್ ಶೆಟ್ಟಿ ಅವರ ‘ಉಳಿದವರು ಕಂಡಂತೆ’, ‘ರಿಕ್ಕಿ’, ‘ಕಿರಿಕ್ ಪಾರ್ಟಿ’ ಹಾಗೂ ಪುನೀತ್ ರಾಜ್‌ಕುಮಾರ್ ಅವರ ‘ರಣ ವಿಕ್ರಮ’ ಚಿತ್ರಗಳಲ್ಲಿ ಅವರ ನಟನೆ ಗಮನಸೆಳೆದಿತ್ತು. ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳಲ್ಲಿ ಶೆಟ್ಟಿ ಎಂಬ ಪಾತ್ರವನ್ನು ದಿನೇಶ್ ಮಂಗಳೂರು ಸೊಗಸಾಗಿ ನಿಭಾಯಿಸಿದ್ದರು. ಈ ಪಾತ್ರ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತ್ತು. ‘ವೀರ ಮದಕರಿ’, ‘ಚಂದ್ರಮುಖಿ ಪ್ರಾಣಸಖಿ’ ಮುಂತಾದ ಸಿನಿಮಾಗಳಿಗೆ ಅವರು ಕಲಾ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಈ ವರ್ಷ ತೆರೆಕಂಡ ‘ಭುವನಂ ಗಗನಂ’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾಗಳಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
























