ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ ಇಂದು

ಬಿಜೆಪಿ ಮುಖಂಡ ಬಿ.ಎಲ್‌.ಸಂತೋಷ್‌ ನಿಂದನೆ ಪ್ರಕರಣದಲ್ಲಿ ಸೆರೆಯಾಗಿರುವ ತಿಮರೋಡಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ ಜೈಲು ಸೇರಿರುವ ಮಹೇಶ್ ಶೆಟ್ಟಿ ತಿಮರೋಡಿಯ ಜಾಮೀನಿ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಗುರುವಾರ ಬ್ರಹ್ಮಾವರ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು ಬಳಿಕ ಅರೆಸ್ಟ್ ಮಾಡಿದ್ದರು. ನಂತರ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ತಿಮರೋಡಿ ಹಿರಿಯಡ್ಕ ಸಬ್ ಜೈಲಿನಲ್ಲಿದ್ದಾರೆ. ಬಂಧಿಸುವ ವೇಳೆ ಉಜಿರೆಯಲ್ಲಿರುವ ತಿಮರೋಡಿ ಮನೆಯಲ್ಲಿ ಹೈಡ್ರಾಮಾ ನಡೆದಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಿರೀಶ್‌ ಮಟ್ಟಣ್ಣವರ ಸೇರಿ 30 ಜನರ ವಿರುದ್ಧ ಪ್ರತ್ಯೇಕ ಕೇಸ್‌ ದಾಖಲಾಗಿದೆ.

ಹಿರಿಯಡ್ಕ ಸಬ್ ಜೈಲಿನಲ್ಲಿ ಮಹೇಶ್ ತಿಮರೋಡಿ ಪ್ರತ್ಯೇಕ ಸೆಲ್‌ನಲ್ಲಿ ಎರಡು ದಿನ ಕಳೆದಿದ್ದಾರೆ. ತಿಮರೋಡಿ ಭೇಟಿಗೆ ಬಂದ ಬೆಂಬಲಿಗರಿಗೆ ಅವಕಾಶವೂ ಸಿಕ್ಕಿಲ್ಲ. ಬಿಪಿ ಏರುಪೇರು ಆದ ಕಾರಣ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಲಾಗಿದೆ. ಗುರುವಾರ ಬ್ರಹ್ಮಾವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸಂಚಾರಿ ಪೀಠವಾದ ಕಾರಣ ಇಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.





















































 
 

ವಕೀಲನ ವಿರುದ್ಧ ಎಫ್‌ಐಆರ್‌

ಈ ನಡುವೆ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ್ದ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ ಎಂಬವರು ನೀಡಿದ ದೂರು ಆಧರಿಸಿ ಎಫ್​ಐಆರ್ ದಾಖಲಾಗಿದೆ. ಧರ್ಮಸ್ಥಳದಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್​ ಜುಲೈ 30ರಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.

ಪಾಯಿಂಟ್ ನಂಬರ್ 1ರಲ್ಲಿ 2 ಹೆಣ, ಪಾಯಿಂಟ್ ನಂಬರ್‌ 2, 3ರಲ್ಲಿ ತಲಾ 2 ಹೆಣ‌, ಪಾಯಿಂಟ್ ನಂಬರ್‌ 4 ಮತ್ತು 5ರಲ್ಲಿ ತಲಾ 6 ಹೆಣ, ಪಾಯಿಂಟ್ ನಂಬರ್​ 6, 7ರಲ್ಲಿ ತಲಾ 8 ಹೆಣ, ಪಾಯಿಂಟ್​ ನಂಬರ್ 9ರಲ್ಲಿ 6-7 ಹೆಣ, ಪಾಯಿಂಟ್ ನಂಬರ್ 10ರಲ್ಲಿ 3, 11ರಲ್ಲಿ 9 ಹೆಣ,. ಪಾಯಿಂಟ್ ನಂಬರ್​ ​12ರಲ್ಲಿ 4-5 ಹೆಣ ಪಾಯಿಂಟ್ ನಂ 13ರಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು. ಈ ಸಂಬಂಧ ರಘುರಾಮ ಶೆಟ್ಟಿ ಅವರು ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ, ಬಿಎನ್​ಎಸ್​ ಕಾಯ್ದೆ 353(1)ಬಿ, 353(2)ರ ಅಡಿ ಎಫ್ಐಆರ್‌ ದಾಖಲಾಗಿದೆ.

error: Content is protected !!
Scroll to Top