ಆಡಿಯೋ ಹರಿಬಿಟ್ಟು ಪ್ರಕರಣ ಬಗ್ಗೆ ಮಾತನಾಡಿದ ವೃದ್ಧೆ
ಧರ್ಮಸ್ಥಳ: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಹೇಳಿಕೊಂಡಿದ್ದ ಸುಜಾತ ಭಟ್ ಈಗ ದಿಢೀರ್ ಎಂದು ಕೇಸನ್ನು ವಾಪಸು ಪಡೆದುಕೊಳ್ಳುವುದಾಗಿ ಹೇಳಿದ್ದು, ಅವರ ಬಗ್ಗೆ ಇರುವ ಅನುಮಾನ ಇನ್ನಷ್ಟು ಹೆಚ್ಚವಾಗುವಂತೆ ಮಾಡಿದೆ.
ಇತ್ತೀಚೆಗೆ ಸುಜಾತಾ ಭಟ್ ತಮ್ಮ ಮಗಳೆಂದು ಫೋಟೋವೊಂದನ್ನು ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಸತ್ಯ ಹೊರಬಂದಿತ್ತು. ಹೀಗಿರುವಾಗ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದು, ಅವರ ಈ ನಡೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಅನನ್ಯಾ ಭಟ್ ಪ್ರಕರಣವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿ ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್ಗೆ ನೋಟಿಸ್ ನೀಡಿದೆ. ಎಸ್ಐಟಿ ನೋಟಿಸ್ಗೆ ಉತ್ತರಿಸದ ಸುಜಾತಾ ಭಟ್, ಅವರದ್ದೇ ಎನ್ನಲಾದ ಆಡಿಯೋ ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್ಐಟಿಗೆ ಹೇಳಿಲ್ಲ ಎಂದು ತಿಳಿದುಬಂದಿದೆ.
ಈಗಾಗಲೇ ಎಸ್‌ಐಟಿ ಸುಜಾತಾ ಭಟ್ ಹಿನ್ನೆಲೆ, ಕುಟುಂಬದ ಮಾಹಿತಿ, 2003ರಲ್ಲಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ಸಲ್ಲಿಸಿದ್ದ ದೂರು, ಕಳೆದ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರು ಎಲ್ಲದರ ಮಾಹಿತಿ ಪಡೆದುಕೊಂಡಿದೆ.
ದೂರಿನಲ್ಲಿ ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ದು, ಕೆಲ ದಿನ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೇ ತಂಗಿದ್ದರು. ಸುಜಾತಾ ಅವರಿಗೆ ಮಗಳು ಇದ್ದಳು ಎಂಬ ಬಗ್ಗೆ ದಾಖಲೆ ತೆಗೆಯಲು ಹೋರಾಟಗಾರರು ಮುಂದಾಗಿದ್ದರು. ಆದರೆ ದಾಖಲೆ ತೆಗೆಯಲು ಅವರು ಒಪ್ಪಿರಲಿಲ್ಲ. ಅದಾದ ಬಳಿಕ ಒಂದೊಂದಾಗಿ ಅಸಲಿಯತ್ತು ಬಹಿರಂಗಗೊಳ್ಳುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಸುಜಾತಾ ಭಟ್ಗೆ ಗೇಟ್‌ಪಾಸ್ ನೀಡಲಾಗಿತ್ತು.
ಆ.19ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ತಿಮರೋಡಿಯಿಂದ ತೆರಳಿದ್ದ ಸುಜಾತಾ, ಹೋರಾಟಕ್ಕೆ ಹಿನ್ನಡೆ ಸಾಧ್ಯತೆ ಹಿನ್ನೆಲೆ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದರು. ಪ್ರಕರಣ ಎಸ್ಐಟಿಗೆ ಹಸ್ತಾಂತರ ಆದ ಬೆನ್ನಲ್ಲೇ ಅಧಿಕಾರಿಗಳು ಸುಜಾತಾ ಭಟ್ ವಿಚಾರಣೆ ನಡೆಸಲಿದ್ದಾರೆ. ಆ ಮೂಲಕ ಅನನ್ಯಾ ಪ್ರಕರಣದ ಪೂರ್ವಾಪರ ಕೆದಕಲು ಎಸ್ಐಟಿ ಮುಂದಾಗಿದೆ. ಪ್ರಕರಣವೇ ಸುಳ್ಳು ಎಂಬ ಬಗ್ಗೆ ಎಸ್ಐಟಿ ಅನೇಕ ಮಾಹಿತಿ ಸಂಗ್ರಹಿಸಿದ್ದು, ಈ ಮಾಹಿತಿಗಳ ಆಧಾರದಲ್ಲಿ ಸುಜಾತಾ ವಿಚಾರಣೆ ಸಾಧ್ಯತೆ ಇದೆ.
























