ದಿನಕ್ಕೊಂದು ಅನೂಹ್ಯ ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಟ್ರಿ – ಅಪಪ್ರಚಾರದ ವಿರುದ್ಧ ದೂರು

ಧರ್ಮಸ್ಥಳ : ಧರ್ಮಸ್ಥಳದ ಶವ ಹೂತ ಪ್ರಕರಣ ದಿನಕಳೆದಂತೆ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ದಿನಕ್ಕೊಬ್ಬರಂತೆ ಎಂಟ್ರಿಯಾಗುತ್ತಿದ್ದು, ಎಸ್‌ಐಟಿ ಅಧಿಕಾರಿಗಳೇ ಗೊಂದಲಕ್ಕೊಳಗಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಗೆ ಬಹು ಆಯಾಮದಲ್ಲಿ ತನಿಖೆ ನಡೆಸಲು ತನಿಖಾ ತಂಡ ಪ್ರಣವ್‌ ಮೊಹಾಂತಿ ಸೂಚಿಸಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ವಿಡಿಯೋ ಹಾಕಿದ್ದಾರೆ ಎಂದು ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಕೂಡ ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ದೂರು ಸುಳ್ಳಾದರೆ ಸುಜಾತಾ ಭಟ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚಿಂತಿಸುತ್ತಿದೆ. ಈ ನಡುವೆ ಖಾಸಗಿ ವಾಹಿನಿಗಳು ಮುಸುಕುಧಾರಿಯ ಜೊತೆಗಿದ್ದವರು, ಮಾಜಿ ಹೆಂಡತಿ ಮುಂತಾದವರನ್ನು ಹುಡುಕಿಕೊಂಡು ಹೋಗಿ ಹೊಸ ಹೊಸ ರಹಸ್ಯಗಳನ್ನು ಬಯಲಿಗೆಳೆಯುತ್ತಿವೆ.





















































 
 

ಗುರುವಾರ ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದು ಅಧಿಕಾರಿಗಳಿಗೆ ಬಹು ಆಯಾಮದ ತನಿಖೆಗಳನ್ನು ನಡೆಸಲು ಸೂಚಿಸಿದ್ದಾರೆ. ತನಿಖೆಗಳನ್ನು ಯಾವ ರೀತಿ ನಿರ್ವಹಿಸಬೇಕು, ಮುನ್ನಡೆಸಬೇಕು ಎಂಬುದನ್ನು ಅವರು ನಿರ್ದೇಶಿಸಿದ್ದಾರೆ. ಬಳಿಕ ಬಂದ ದೂರುಗಳ ಬಗ್ಗೆ ಎಲ್ಲ ದಿಕ್ಕುಗಳಿಂದ ಮಾಹಿತಿ ಸಂಗ್ರಹಿಸುವಂತೆ ಮತ್ತು ಅವುಗಳ ಪೂರ್ವಾಪರಗಳ ಟಿಪ್ಪಣಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಮುಂದಿನ ತನಿಖೆಯ ರೂಪುರೇಷೆ ಸಿದ್ಧಗೊಳ್ಳಲಿದೆ ಎಂದು ನಿರ್ಣಯವಾಗಿದೆ. ಎಸ್‌ಐಟಿ ಠಾಣೆಗೆ ಇತರ ದೂರುಗಳು ಬಂದಿದ್ದು, ಇದರ ತನಿಖೆಯೂ ನಡೆಯಬೇಕಿದೆ. ಈಗಾಗಲೇ ಎಸ್‌ಐಟಿ ಠಾಣೆಯಲ್ಲಿ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಧರ್ಮಸ್ಥಳ ಗ್ರಾಮದ ಅಲ್ಲಲ್ಲಿ ಹಾಗೂ ತಾಲೂಕಿನ ಸೂಕ್ಷ್ಮ ಸ್ಥಳಗಳಲ್ಲಿ ಮೀಸಲು ಪೊಲೀಸ್‌ ಕಾವಲು ಮುಂದುವರಿದಿದೆ.

ಸ್ನೇಹಮಯಿ ಕೃಷ್ಣ ಎಂಟ್ರಿ

ಸಾಮಾಜಿಕ ಹೋರಾಟಗಾರ ಮತ್ತು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಧರ್ಮಸ್ಥಳ ಠಾಣೆಗೆ ಬಂದು, ಸಾಮಾಜಿಕ ತಾಣಗಳಲ್ಲಿ ವಿಡಿಯೋಗಳ ಮೂಲಕ ಧರ್ಮಸ್ಥಳವನ್ನು ಮತ್ತು ವೀರೇಂದ್ರ ಹೆಗ್ಗಡೆ ಅವರನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟೆಣ್ಣವರ್‌, ಸಮೀರ್‌ ಎಂ.ಡಿ. ಹಾಗೂ ಸುಜಾತಾ ಭಟ್‌ ವಿರುದ್ಧ ದೂರು ನೀಡಿದ್ದಾರೆ.

ಯಾವುದೇ ಸಾಕ್ಷ್ಯ ಇಲ್ಲದಿದ್ದರೂ ನಿರಂತರ ಅಪಪ್ರಚಾರ ಮಾಡಿದ್ದಾರೆ. ಸುಜಾತಾ ಭಟ್‌ ತನ್ನ ಮಗಳು ನಾಪತ್ತೆ ಅಂತ ಸುಳ್ಳು ದೂರು ನೀಡಿದ್ದಾರೆ. ಈ ಮೂಲಕ ಧರ್ಮಸ್ಥಳ ಹಾಗೂ ಹೆಗ್ಗಡೆ ಅವರ ಅವಹೇಳನ ಮಾಡಿದ್ದಾರೆ. ತಿಮರೋಡಿ, ಮಟ್ಟೆಣ್ಣವರ್‌ ಹಾಗೂ ಸಮೀರ್‌ ಕೂಡ ವಿಡಿಯೋ ಮಾಡಿ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿ ತನ್ನ ದೂರನ್ನು ತಕ್ಷಣ ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅವರ ದೂರನ್ನು ಸ್ವೀಕರಿಸಿರುವ ಠಾಣೆಯವರು ಎನ್‌ಸಿಆರ್‌ ದಾಖಲಿಸಿಕೊಂಡಿದ್ದಾರೆ.

ಎಸ್‌ಐಟಿ ಅನನ್ಯಾ ಭಟ್‌ ಪ್ರಕರಣದ ಕೂಲಂಕಷ ತನಿಖೆಗೆ ಮುಂದಾಗಿದ್ದು, ಮೊದಲ ಹಂತವಾಗಿ ಅನನ್ಯಾ ಭಟ್‌ ಅಸ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇಡೀ ಪ್ರಕರಣವೇ ಸುಳ್ಳು ಎಂಬ ಹಂತಕ್ಕೆ ಎಸ್‌ಐಟಿಯವರು ಬಂದು ತಲುಪಿದ್ದಾರೆ ಎಂದೂ ಹೇಳಲಾಗುತ್ತಿದೆ. ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಸುಜಾತಾ ಭಟ್‌ ವಿಚಾರಣೆ ಸಾಧ್ಯತೆಯಿದೆ. ಸುಜಾತಾ ಭಟ್‌ ಅವರಿಗೆ ಪುತ್ರಿಯ ಅಸ್ತಿತ್ವದ ಬಗ್ಗೆ ದಾಖಲೆ ಸಲ್ಲಿಸಲು ಎಸ್‌ಐಟಿ ಸೂಚಿಸಲಿದೆ. ವಿಚಾರಣೆ ಬಳಿಕ ಸುಜಾತಾ ಭಟ್‌ ವಿರುದ್ಧ ಪರಿಶೀಲಿಸಿ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.

error: Content is protected !!
Scroll to Top