ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅವಹೇಳನ ಮಾಡಿದ ಆರೋಪ

ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಡಿಯೋ ಮಾಡಿ ಸದ್ಯ ಜಾಮೀನು ಪಡೆದು ಬಂಧನದಿಂದ ಪಾರಾಗಿರುವ ಯೂಟ್ಯೂಬರ್ ಮೊಹಮ್ಮದ್‌ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಎಂಬವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಕಡೂರು ಪೊಲೀಸರು ಮಂಜು ಜೈನ್‌ರಿಂದ ದೂರು ಪಡೆದು ಉನ್ನತ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.





















































 
 

ಜಿಲ್ಲೆಯ ಕಳಸ ಪಟ್ಟಣದಲ್ಲೂ ಜೈನ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಚಿಕ್ಕಮಗಳೂರು ನಗರದಲ್ಲೂ 2000ಕ್ಕೂ ಹೆಚ್ಚು ಜನ ಧರ್ಮಸ್ಥಳದ ಬಗ್ಗೆ ಪ್ರತಿಭಟನೆ ನಡೆಸಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ಮಾಡಿ ಧರ್ಮಸ್ಥಳವನ್ನ ಅವಹೇಳನ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.

ಧರ್ಮಸ್ಥಳಕ್ಕೆ ಹೋಗಲು ಭಯ

ಧರ್ಮಸ್ಥಳಕ್ಕೆ ಹೋಗಲು ಭಯ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದು ಸಮೀರ್‌ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆ ಪೊಲೀಸರು ಕೊಟ್ಟಿದ್ದ ನೊಟೀಸ್‌ಗೆ ಉತ್ತರಿಸಿದ್ದ ಸಮೀರ್, ಭದ್ರತೆ ದೃಷ್ಟಿಯಿಂದ ವಿಚಾರಣೆಗೆ ಹಾಜರಾಗಲು ಆ.13ರಂದು ಪತ್ರದ ಮೂಲಕ ಪೊಲೀಸರ ಬಳಿ ಕಾಲಾವಕಾಶ ಕೇಳಿದ್ದರು.

ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆಯಾಗಿದೆ. ನನಗೆ ಈಗಾಗಲೇ ಬೆದರಿಕೆ ಇರುವ ಕಾರಣ ಧರ್ಮಸ್ಥಳಕ್ಕೆ ವಿಚಾರಣೆಗೆ ಬರಬೇಕಾದರೆ ಹೆಚ್ಚಿನ ಭದ್ರತೆ ನೀಡಿ. ಇಲ್ಲವೇ ಪರ್ಯಾಯ ಜಾಗದ ವ್ಯವಸ್ಥೆ ಮಾಡಿ. ನನ್ನ ಯೂಟ್ಯೂಬ್ ಕಂಟೆಂಟ್ ಮೇಲೆ ದೂರು ಕೊಟ್ಟಿದ್ದಾರೆ. ಹಾಗಾಗಿ ನಾನು ನೇರವಾಗಿ ಠಾಣೆಗೆ ಬರಲು ಸಾಧ್ಯವಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿಯಾಗಲು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸಮೀರ್‌ ಪತ್ರಕ್ಕೆ ಕೇರ್ ಮಾಡದ ಧರ್ಮಸ್ಥಳ ಪೊಲೀಸರು ನಿನ್ನೆ ಬಂಧಿಸಲು ಬೆಂಗಳೂರಿಗೆ ತೆರಳಿದ್ದರು.

error: Content is protected !!
Scroll to Top