ಬಿ.ಎಲ್. ಸಂತೋಷ್ ಅವರನ್ನು ನಿಂದಿಸಿದ ಪ್ರಕರಣ
ಉಜಿರೆ ಮನೆಯಲ್ಲಿ ತಿಮರೋಡಿ ಬೆಂಬಲಿಗರಿಂದ ಪ್ರತಿರೋಧ- ಪೊಲೀಸರ ಜೊತೆ ವಾಗ್ವಾದ
ಮಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಇಂದು ಮನೆಯಿಂದ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತಿಮರೋಡಿ, ಬಿಎಲ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಭಾರಿ ಹೈಡ್ರಾಮಾದ ಬಳಿಕ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 8 ವಾಹನಗಳಲ್ಲಿ ತಿಮರೋಡಿ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಉಜಿರೆಯಲ್ಲಿರುವ ಅವರ ಮನೆಯಲ್ಲೇ ವಶಕ್ಕೆ ಪಡೆದಿದೆ.
ತಿಮರೋಡಿ ನಿವಾಸದ ಬಳಿ ಹೈಡ್ರಾಮಾ
ಇದಕ್ಕೂ ಮುನ್ನ ಮನೆಯ ಮುಂಭಾಗ ದೊಡ್ಡಮಟ್ಟದಲ್ಲಿ ಜಮಾಯಿಸಿದ್ದ ತಿಮರೋಡಿ ಬೆಂಬಲಿಗರು ಬಂಧಿಸದಂತೆ ಆಗ್ರಹಿಸಿದರು. ಏನೇ ವಿಚಾರಣೆ ಇದ್ದರೂ ಇಲ್ಲೇ ನಡೆಸಿ ಎಂದು ಪಟ್ಟು ಹಿಡಿದರು. ಗಿರೀಶ್ ಮಟ್ಟಣ್ಣನವರ್ ಕೂಡ ಕಾರಣ ಕೇಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ಪೊಲೀಸರು ತಿಮರೋಡಿಯನ್ನ ವಶಕ್ಕೆ ಪಡೆದು ಖಾಸಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ ಹಾಗೂ ಇಡೀ ಬಿಜೆಪಿ ನಾಯಕರು ಹೊಣೆ ಎಂದು ಸಾಮಾಜಿಕ ಕಾರ್ಯಕರ್ಯ ಮಹೇಶ್ ಶೆಟ್ಟಿ ತಿಮರೋಡಿ ಈ ವೇಳೆ ಹೇಳಿದ್ದಾರೆ. ನಮ್ಮ ಉದ್ದೇಶ ಏನಿದ್ದರೂ ಸೌಜನ್ಯಗೆ ನ್ಯಾಯ ಸಿಗಬೇಕು. ಈ ಹೋರಾಟ ಮುಂದುವರಿಯಬೇಕು. ಅತ್ಯಾಚಾರಿಗಳ ಬಂಧನ ಆಗಬೇಕು. ಎಸ್‌ಐಟಿ ತನಿಖೆ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯವರ ಪಾಪದ ಕೂಸು ಸರ್ವನಾಶ ಆಗುತ್ತೆ ಎಂದು ನುಡಿದರು.
ನಾನೀಗ ಪೊಲೀಸ್ ಠಾಣೆಗೆ ಹೋಗ್ತೀನಿ, ಪೊಲೀಸರಿಗೆ ಸರಿಯಾದ ಮಾಹಿತಿ ಕೊಡ್ತೀನಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಬೆಂಬಲಿಗರು ʻಜಸ್ಟೀಸ್ ಫಾರ್ ಸೌಜನ್ಯʼ ಎಂದು ಘೋಷಣೆ ಕೂಗಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.
ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ ಬಿಎಲ್ ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
























