ಮೋದಿ ಫ್ರಾಡ್‌ ಎಂದ ಕಾಂಗ್ರೆಸ್‌ ಸದಸ್ಯ : ವಿಧಾನ ಪರಿಷತ್‌ನಲ್ಲಿ ತಡರಾತ್ರಿ ತನಕ ಕೋಲಾಹಲ

ಬಿಜೆಪಿಯ ಭಾರಿ ಪ್ರತಿಭಟನೆಗೆ ಮಣಿದು ಕ್ಷಮೆ ಕೇಳಿದ ನಜೀರ್‌ ಅಹ್ಮದ್‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ ಹೇಳಿದ ನಿಂದನೆಯ ಮಾತು ನಿನ್ನೆ ತಡರಾತ್ರಿ ತನಕ ವಿಧಾನ ಪರಿಷತ್‌ನಲ್ಲಿ ಹೈಡ್ರಾಮಾಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ಈ ದೇಶದ ದೊಡ್ಡ ಫ್ರಾಡ್‌ ಎಂದು ನಜೀರ್‌ ಅಹ್ಮದ್‌ ನಿಂದಿಸಿದ್ದು, ಬಿಜೆಪಿಯ ಆಕ್ರೋಶಭರಿತ ಪ್ರತಿಭಟನೆಯಿಂದಾಗಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಭಾರಿ ವಾಗ್ವಾದ ನಡೆದು ತಡರಾತ್ರಿವರೆಗೂ ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮುಂದುವರಿಯಿತು. ಕೊನೆಗೆ ಸಭಾಪತಿ ಎಚ್ಚರಿಕೆ ಬಳಿಕ ನಜೀರ್‌ ಅಹ್ಮದ್‌ ಸದನದ ಕ್ಷಮೆಯಾಚಿಸಿ ವಿವಾದ ಮುಕ್ತಾಯವಾಯಿತು.

ಮೋದಿ ಈ ದೇಶದ ದೊಡ್ಡ ಫ್ರಾಡ್, ಅದಾನಿ, ಅಂಬಾನಿಗೆ ದೇಶ ಮಾರಿದವರು ಮೋದಿ. ವೋಟ್ ಚೋರಿ ಮಾಡಿ ಪ್ರಧಾನಿ ಆಗಿರುವುದು ಮೋದಿ ಎಂದು ಲೇವಡಿ ಮಾಡಿದರು. ಇದರಿಂದ ಕೆಂಡಾಮಂಡಲವಾದ ಬಿಜೆಪಿ ಸದಸ್ಯರು ನಜೀರ್ ಅಹಮದ್ ಕ್ಷಮೆ ಕೇಳುವಂತೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದನದಲ್ಲಿ ಗದ್ದಲ, ಕೋಲಾಹಲ ತಡರಾತ್ರಿವರೆಗೂ ಮುಂದುವರಿಯಿತು. ನಜೀರ್‌ ಅವರನ್ನು ಸದನದಿಂದ ಹೊರ ಹಾಕುವಂತೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು. ಇಷ್ಟಾದರೂ ತನ್ನ ಹೇಳಿಕೆಯಿಂದ ಹಿಂದೆ ಸರಿಯದ ನಜೀರ್‌, ಮೋದಿ ಫ್ರಾಡ್‌ ಎನ್ನುವುದನ್ನು ಸಾಬೀತು ಮಾಡುತ್ತೇನೆ ಎಂದು ಸಮರ್ಥನೆ ಮಾಡಿಕೊಂಡರು.





















































 
 

ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಕ್ಷಮೆ ಕೇಳದಿದ್ದರೆ, ಸದನದಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನಜೀರ್‌, ನನಗೆ ಬಹಳ ದುಃಖ ಆಗಿದೆ, ನನ್ನ ಕಸಿನ್ ಬ್ರದರ್ ಮನ್ಸೂರ್ ಅಲಿ ಖಾನ್ 32 ಸಾವಿರ ಓಟಿನಿಂದ ಸೋತಿದ್ದಾರೆ. ಇದಕ್ಕೆ ಓಟ್ ಚೋರಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಚುನಾವಣೆಯಲ್ಲಿ ಫ್ರಾಡ್ ಮಾಡಿ ಪ್ರಧಾನಿ ಆಗಿದ್ದಾರೆ. ಹೀಗೆ ಮಾಡಿದ್ದಕ್ಕೆ ಶೇ.50 ಟ್ಯಾಕ್ಸ್ ಹಾಕಿದ್ದು ಟ್ರಂಪ್ ಎಂದು ಮತ್ತೆ ಲೇವಡಿ ಮಾಡಿದರು.

ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಇಲ್ಲಿ ಚುನಾವಣೆ ನಡೆಯುತ್ತಿಲ್ಲ, ಬೇಕಿದ್ದರೆ ಹೊರಗೆ ಹೋಗಿ ಮಾತನಾಡಿ ಎಂದು ಕಿಡಿಕಾರಿದರು. ಈ ವೇಳೆ ಸ್ವತಃ ಆಡಳಿತ ಪಕ್ಷದ ಸದಸ್ಯರಿಂದಲೇ ನಜೀರ್‌ ವಿರುದ್ಧ‌ ಆಕ್ಷೇಪ ವ್ಯಕ್ತವಾಯಿತು. ಪ್ರಧಾನಿ ಬಗ್ಗೆ ಮಾತಾಡಿದ್ದು ಯಾರೇ ಆದರೂ ತಪ್ಪು ಎಂದು ಸಭಾ ನಾಯಕ ಭೋಸರಾಜು ಹೇಳಿದರು.

ಇದು ಒಳ್ಳೆ ಸಂಸ್ಕೃತಿ ಅಲ್ಲ, ಆಡಿದ ಮಾತು ಹಿಂಪಡೆಯಿರಿ ಎಂದ ಸಭಾಪತಿ ಹೇಳಿದರು. ಕೊನೆಗೆ ಆಕ್ರೋಶಕ್ಕೆ ಮಣಿದ ನಜೀರ್‌ ಕ್ಷಮೆ ಕೋರಿದರು. ನೋಡಿ ನಾನು ನೋವಿನಿಂದ ಹೇಳಿದ್ದು ನಿಜ, ಮೋದಿ ಪಾಲಿಸಿ, ಮೋದಿ ಕಾರ್ಯಕ್ರಮಗಳಿಂದ ನನಗೆ ನೋವಾಗಿದೆ. ನಾನು ನಿಮ್ಮ ಪೀಠಕ್ಕೆ ಬೆಲೆ ಕೊಡುತ್ತೇನೆ. ಬಾಯಿಯಿಂದ ಏನಾದರೂ ಹೇಳಬಹುದು ಆದರೆ ಹೃದಯದಿಂದ ಬರುವುದಿಲ್ಲ, ನಿಮಗೆ ದುಃಖ ಆಗಿದ್ದರೆ ಮಾತು ಹಿಂಪಡೆಯುತ್ತೇನೆ ಎಂದರು. ಬಳಿಕ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು.

error: Content is protected !!
Scroll to Top