ಗಾಂಧಿ ಕುಟುಂಬವನ್ನು ಮೆಚ್ಚಿಸಲು ಸಿದ್ದರಾಮಯ್ಯನವರ ಕೊಡುಗೆ ಎಂಬ ಆರೋಪ
ಬೆಂಗಳೂರು: ಕಳೆದ ವರ್ಷ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಘಟನೆಯ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ 10 ಕೋ. ರೂ. ನೆರವು ನೀಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದ ಹಿತವನ್ನು ಕಡೆಗಣಿಸಿ ಪಕ್ಕದ ಕೇರಳಕ್ಕೆ ಕೋಟಿಗಟ್ಟಲೆ ನೆರವು ನೀಡಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ. ವಯನಾಡು ಪ್ರಿಯಾಂಕ ಗಾಂಧಿ ಗೆದ್ದಿರುವ ಲೋಕಸಭಾ ಕ್ಷೇತ್ರ.
ನಮ್ಮ ದುಡ್ಡು ಕೇರಳಕ್ಕೆ ನೆರವು. ಇದು ರಾಜ್ಯ ಸರ್ಕಾರದ ನಿಲುವು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರ ನೆರವು ನೀಡುತ್ತಿದೆ ಎಂದು ಆರೋಪಿಸಲಾಗಿದೆ.
ಪೂರಕ ಅಂದಾಜಿನಲ್ಲಿ ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಭೂಕುಸಿತ ಕಾರಣದಿಂದ ಹಾನಿಗೊಳಗಾದವರ ಪುನರ್ವಸತಿಗೆ 10 ಕೋಟಿ ರೂ. ಕೊಡಲಾಗಿದೆ. ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ಅನುದಾನ ಎಂದು ಉಲ್ಲೇಖಿಸಿದ್ದಾರೆ.
ಕಂದಾಯ ಇಲಾಖೆ ಅಡಿಯಲ್ಲಿ ಬರುವ ಎಸ್‌ಡಿಆರ್‌ಎಫ್ ಅನುದಾನ ನೀಡುತ್ತಿರುವುದಾಗಿ ಉಲ್ಲೇಖಿಸಿದೆ. ಆದರೆ ಪ್ರಿಯಾಂಕ ಗಾಂಧಿ ಸಂಸದೆಯಾಗಿರುವ ವಯನಾಡ್ ಕ್ಷೇತ್ರದ ಮೆಪ್ಪಾಡಿ ಹಾನಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ರಸ್ತೆ ಗುಂಡಿ ಮುಚ್ಚಲು ಕೂಡ ಸರ್ಕಾರದ ಬಳಿ ಹಣ ಇಲ್ಲ. ಕೆಎಸ್‌ಆರ್‌ಟಿಸಿ ನೌಕರರು, ಸರ್ಕಾರಿ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿ ನೀಡಲಾಗುತ್ತಿಲ್ಲ, ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆಯಾಗುತ್ತಿಲ್ಲ. ಆದರೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯನವರು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಕೂಡಲೇ 10 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ.
























