ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ರಥಯಾತ್ರೆಯಲ್ಲಿ ಸಂಭವಿಸಿದ ದುರಂತ
ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತರನ್ನು ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ.
ರಾಮಂತಪುರದ ಗೋಕುಲನಗರದಲ್ಲಿ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಥೋತ್ಸವ ಏರ್ಪಡಿಸಲಾಗಿತ್ತು. ರಥವನ್ನು ಎಳೆಯುತ್ತಿದ್ದ ವಾಹನ ಕೆಟ್ಟು ನಿಂತಾಗ ಕೆಲವು ಯುವಕರು ರಥವನ್ನು ಕೈಯಿಂದ ತಳ್ಳಿಕೊಂಡು ಹೋದರು. ಆಗ ರಥ ಓವರ್ ಹ್ಯಾಡ್ ವಯರ್ ಸಂಪರ್ಕಕ್ಕೆ ಬಂದು ವಿದ್ಯುತ್ ಪ್ರವಹಿಸಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
























